ಚಾತುರ್ಮಾಸ್ಯ ವೃತ

ಚಾತುರ್ಮಾಸ್ಯ ವೃತ ಆಚರಣೆಯ ಹಿನ್ನಲೆ 

003-Sri_Vishnu

ಸನಾತನವಾದ ವೇದ ಪ್ರಪಂಚದಲ್ಲಿ ಸೂಚಿತವಾದ ಜೀವನ ಕ್ರಮದ ಅನ್ವಯ, ಸನ್ಯಾಸಾಶ್ರಮ ಸ್ವೀಕರಿಸಿದ ಯತಿಗಳಿಗೆ ಪ್ರತ್ಯೇಕವಾದ ವೃತ ನಿಯಮಗಳಿದ್ದು, ಅದರಲ್ಲಿ ಚಾತುರ್ಮಾಸ್ಯವೂ ಅತ್ಯಂತ ಪ್ರಮುಖವಾಗಿದೆ.
ಸನ್ಯಾಸಾಶ್ರಮ ಸ್ವೀಕರಿಸುವ ಯತಿಗಳು ಸಂಸಾರದ ಎಲ್ಲ ಬಂಧನಗಳಿಂದ ಮುಕ್ತರಾಗಿದ್ದು, ನಿಶ್ಚಿತವಾದ ನೆಲೆ ಹಾಗೂ ವಾಸಸ್ಥಾನ (ನಿವಾಸ) ಹೊಂದಿರುವದಿಲ್ಲ. ನಿತ್ಯ ಸಂಚಾರವೇ ಮುಖ್ಯ ಧರ್ಮವಾಗಿರುವ ಯತಿಗಳು, ಸಂಚಾರದೊಂದಿಗೆ ಪ್ರತಿನಿತ್ಯದ ಧರ್ಮ ಕಾರ್ಯ, ಧರ್ಮ ಜಾಗ್ರತಿ ಮೂಡಿಸುತ್ತಾರೆ. ಇಂತಹ ಯತಿಗಳಿಗೂ ವರ್ಷದ ಕೆಲವು ಕಾಲ ಸಂಚಾರವನ್ನು ತೊರೆದು, ಒಂದೇ ಸ್ಥಳದಲ್ಲಿ ವಾಸ್ತವ್ಯ ಮಾಡಬೇಕು ಎಂಬ ನಿಯಮಗಳನ್ನು ವೇದ ಪ್ರಪಂಚ ಜಾರಿಗೆ ತಂದಿದೆ. ಧಾರ್ಮಿಕ ಕಾರಣಗಳು : ಆಶಾಢ ಮಾಸ ಮಳೆಗಾಲದ ಅವಧಿಯಾಗಿದ್ದು, ಕ್ರಿಮಿಕೀಟಗಳ ಸಂತತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಯತಿಗಳಲ್ಲಿ ಇರುವ ಭೂತದಯೆ (ಹಿಂಸಾ ವಿರೋಧಿ) ಮನೋಭಾವದ ಅಡಿ, ಯತಿಗಳ ಸಂಚಾರದಿಂದ ಯಾವದೇ ಕ್ರಿಮಿ ಕೀಟಾದಿಗಳಿಗೂ ತೊಂದರೆ, ಪ್ರಾಣ ಹಾನಿಯಾಗಬಾರದು. ಯಾವದೇ ಸಂದರ್ಭದಲ್ಲಿಯೂ ಯತಿಗಳು ವಾಸ್ತವ್ಯದ ಸ್ಥಳದಿಂದ ಹೊರಗೆ ಬರಬಾರದು ಎಂಬ ನಿಯಮಾವಳಿಗಳಿವೆ. ಚಾತುರ್ಮಾಸ್ಯದ ಅವಧಿಯ ಪೂರ್ಣ ಅಗತ್ಯವಾದ ಎಲ್ಲ ದಿನಬಳಕೆಯ ವಸ್ತುಗಳನ್ನೂ ಮುಂಚಿತವಾಗಿ ಸಂಗ್ರಹಿಸಿ ಇಟ್ಟುಕೊಳ್ಳುವ ಸಂಪ್ರದಾಯವೂ ಆಚರಣೆಯಲ್ಲಿದೆ.
ಶ್ರೀಮಠದಲ್ಲಿರುವ ಶಿಷ್ಯರ ಮೇಲೆ ಅನುಗ್ರಹ ಮುಖಿಗಳಾಗಿರುವ ಯತಿಗಳು, ಈ ಚಾತುಮಾಸ್ಯದ ಅವಧಿಯಲ್ಲಿ ಪಾಠ-ಪ್ರವಚನದ ಬಗ್ಗೆ ವಿಶೇಷ ಆಧ್ಯತೆ ನೀಡಬೇಕು. ಶಿಷ್ಯರ ಉನ್ನತಿಗಾಗಿ ವಿಶೇಷ ಕಾಳಜಿ ತೋರಬೇಕು. ನಿತ್ಯ ಸಂಚಾರವೂ ಇಲ್ಲದ ಕಾರಣ ಪಾಠ ಪ್ರವಚನಗಳು ಸಂಪೂರ್ಣಗೊಳ್ಳಬೇಕು ಎಂಬ ಉದ್ದೇಶವೂ ಈ ಆಚರಣೆಯ ಹಿನ್ನಲೆಯಲ್ಲಿದೆ.
ಪ್ರಾಚೀನ ಪರಂಪರೆಯಲ್ಲಿ ಶ್ರೀಮದ್ ಉತ್ತರಾಧಿಮಠದಲ್ಲಿ ನೀಡಲಾಗುವ ತಪ್ತ ಮುದ್ರಾಧಾರಣೆ ಕಾರ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಭಗವಂತನ ಚಿನ್ನೆಗಳನ್ನು ದೇಹದ ಮೇಲೆ ಮೂಡಿಸಿಕೊಂಡು, ಶರೀರದ ಮೇಲಿನ ವ್ಯಾಮೋಹವನ್ನು ತೊರೆಯಬೇಕು. ಈ ನಶ್ವರವಾದ ದೇಹವನ್ನು ದೇವರ ಸೇವೆಗೆ ಮೀಸಲಾಗಿರಿಸಬೇಕು ಎಂಬ ಚಿಂತನೆಗಳಿವೆ. ಚಾತುರ್ಮಾಸ್ಯದ ಅವಧಿಯಲ್ಲಿ ವಿಶೇಷವಾದ ತಪಃ ಶಕ್ತಿಯನ್ನು ಹೊಂದಿರುವ ಯತಿಗಳಿಂದ ತಪ್ತ ಮುದ್ರಾಧಾರಣೆಯನ್ನು ಶ್ರೀಮಠದ ಪರಂಪರೆಯ ಭಕ್ತರು ಪಡೆಯಲೇಬೇಕು ಎಂಬ ಸೂಚನೆ ಇದೆ. ಯತಿಗಳ ಶಿಷ್ಯರಿಗೆ ಈ ತಪ್ತ ಮುದ್ರಾ ಧಾರಣೆಯನ್ನು ಖಡ್ಡಾಯಗೊಳಿಸಲಾಗಿರುತ್ತದೆ. ಯತಿಗಳ ವಾಸ್ತವ್ಯದ ಸ್ಥಳಕ್ಕೆ ಬರುವ ಶ್ರೀಮಠದ ಎಲ್ಲ ಶಿಷ್ಯ ವರ್ಗ ಯತಿಗಳಿಂದ ತಪ್ತ ಮುದ್ರಾ ಧಾರಣೆಹೊಂದಲು ಈ ಆಚರಣೆ ಸಹಾಯಕವಾಗಿದೆ.
ಪ್ರಾಚೀನ ಪರಂಪರೆಯಲ್ಲಿ ಯತಿಗಳ ಸೇವೆಗೆ ವಿಶೇಷವಾದ ಪ್ರಾಮುಖ್ಯತೆ ನೀಡಲಾಗಿದೆ. ಅತ್ಯಂತ ನಿಷ್ಟೆ ಹಾಗೂ ಭಕ್ತಿಯಿಂದ ಯತಿಗಳ ಸೇವೆಯನ್ನು ನಿರಂತರವಾಗಿ ಮಾಡಿದಲ್ಲಿ ಉತ್ತಮ ಫಲಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಯತಿಗಳ ಸಾಂಗತ್ಯ, ಮಂತ್ರೋಪದೇಶ ಹಾಗೂ ಜಪ ಧ್ಯಾನಗಳು ಅನಂತ ಫಲಗಳೊಂದಿಗೆ ಉತ್ತಮ ಸದ್ಗತಿಗೆ ಕಾರಣವಾಗುತ್ತದೆ ಎಂಬ ಚಿಂತನೆ ಈ ಆಚರಣೆಯ ಹಿಂದೆ ಇದೆ.
ಚಾತುರ್ಮಾಸ್ಯದ ಅವಧಿಯಲ್ಲಿ ದಿನನಿತ್ಯದ ಆಹಾರ ಕ್ರಮದಲ್ಲಿಯೂ ಅಮೂಲಾಗ್ರವಾದ ಬದಲಾವಣೆ ಕಾಣಬಹುದಾಗಿದೆ. ಆಷಾಢ ಮಾಸದಲ್ಲಿ ತರಕಾರಿಗಳ ಬಳಕೆಯನ್ನು ವರ್ಜಿಸಲಾಗಿದ್ದು, ಕೇವಲ ಒಣಗಿದ ಬೇಳೆ ಕಾಳು, ಧಾನ್ಯಗಳನ್ನು ಮಾತ್ರ ಬಳಸಲಾಗುತ್ತದೆ. ಮಳೆಗಾಲದ ಅವಧಿಯಲ್ಲಿ ತರಕಾರಿಗಳಲ್ಲಿಯೂ ಸೂಕ್ಷ್ಮಾಣು ಜೀವಿಗಳು, ಹುಳ ಹುಪ್ಪಡಿಗಳು ಇರುವ ಕಾರಣದಿಂದ ಈ ಆಚರಣೆ ಜಾರಿಗೆ ಬಂದಿದೆ. ಶ್ರಾವಣದಲ್ಲಿ ಮೊಸರು ಹಾಗೂ ಭಾದ್ರಪದ ಮಾಸದಲ್ಲಿ ಹಾಲಿನ ಬಳಕೆಯನ್ನು ತ್ಯಜಿಸಲಾಗುತ್ತದೆ. ಹಾಲು-ಮೊಸರು ಸಮೃದ್ದಿಯ ಸಂಕೇತವಾಗಿದ್ದು, ಇದನ್ನೂ ತ್ಯಜಿಸುವ ತನ್ಮೂಲಕವೂ ದೇಹ ಪೋಷಣೆಗೆ ಪ್ರಾಧಾನ್ಯತೆ ಕಡಿಮೆಯಾಗಲಿ ಎಂಬ ಚಿಂತನೆ ಈ ಆಚರಣೆಯಲ್ಲಿದೆ. ಆಶ್ವೀಜ ಮಾಸದಲ್ಲಿ ದ್ವಿದಳ ಧಾನ್ಯಗಳ ಬಳಕೆಯನ್ನು ಶಾಸ್ತ್ರಗಳು ನಿರಾಕರಿಸಿದೆ. ಕೇವಲ ಕಂದ ಮೂಲ (ಗಡ್ಡೆ ಗೆಣಸುಗಳನ್ನು ಆಹಾರದ ರೂಪದಲ್ಲಿ ಬಳಸಲಾಗುತ್ತದೆ)
ಶ್ರಾವಣ ಮಾಸದಲ್ಲಿ ಮೊಸರಿನ ಬಳಕೆ ದೇಹದ ಪ್ರಕೃತಿಗೂ ಅಪಥ್ಯವಾಗಿದ್ದು, ಮೊಸರು ಹಾಲು ಕಫಕಾರಕ. ಆದ್ದರಿಂದ ಅದನ್ನು ತ್ಯಜಿಸಬೇಕು. ವಾತ, ಪಿತ್ತ, ಕಫ ಪ್ರಕೃತಿಯನ್ನು ತಡೆಗಟ್ಟಲೂ ಈ ಆಹಾರ ಕ್ರಮ ಅತ್ಯಂತ ವೈeನಿಕವಾಗಿದೆ. ಈ ಅವಧಿಯಲ್ಲಿ ಜೀರಿಗೆ, ಮೆಣಸಿನ ಕಾಳನ್ನು ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುವದು ವಾತಾವರಣದ ಅನ್ವಯವೂ ಆರೋಗ್ಯದಾಯಕ ಎಂಬ ಅಭಿಪ್ರಾಯ ಆಯುರ್ವೆದ ವೈಧ್ಯರದ್ದಾಗಿದೆ.

ಕೃಪೆ ವನ್ ಇಂಢಿಯಾ

Leave a comment