Significance of panchamruta abhisheka

Significance of panchamruta abhisheka

 Dasaparadhao toyena kshirena kshamate Satao sahasrao kshamate dadhna , grutena kshamatesyutao.

Madhuna kshamate lakshao ikshuna dasalakshakao narikelaobuna kotio anantao gandhavarina.
Skanda purana

The above sloka is written as ugabhoga by Purandara Dasaru in Kannada as follows:
Aparadha hattakke abisheka udaka
Aparadha nurakke kshira harige
Aparadha sahasrakke halu mosaru kano
Aparadha lakkshakke jenu^^
Aparadha hattu; lakshakke balupari kshira ll

Aparadha kshamege accha tengina halu.
Aparadha kotige svaccha jala
Aparadha ananta kshamege gandhodaka.
Upamerahita namma purandara vithalage
Santa manavayya santavakya.||


Kshira snanao prakurvita ye nara mama murdhani
Satasvamedhajao punyao bioduna smrutao

Bhagavan says “The one who performs Ksheerabhisheka(Milk) on my head, For every drop he will get punya of 100’s of Ashwamedha yaaga”

ಅವಿಧವಾ ನವಮೀ 

​” ಮಾತೃ ವಂದನಮ್ ”

ದಿನಾಂಕ : 24.09.2016 ಶನಿವಾರ ” ಅವಿಧವಾ ನವಮೀ “. ತನ್ನಿಮಿತ್ತ ಶ್ರೀ ವಾಯು ಪುರಾಣಾಂತರ್ಗತ ಶ್ರೀ ವೇದವ್ಯಾಸದೇವರು ಹೇಳಿದ ” ಮಾತೃ ವೈಭವಮ್ “.
” ಅಮ್ಮ ” ಎನ್ನುವ ಅಕ್ಷರದಲ್ಲಿ ” ಅಮೃತ ” ವಿದೆ.

” ಅಮ್ಮ ” ಎಂಬ ಎರಡಕ್ಷರದಲ್ಲಿ ಅಪ್ಯಾಯತೆ – ಅಂತಃಕರಣ – ವಾತ್ಸಲ್ಯ ತುಂಬಿದೆ.

” ಅಮ್ಮ ” ಅಂದರೆ…..

ಗಾಳಿಗೆ ಗೊತ್ತು.

ನಕ್ಷತ್ರಗಳಿಗೆ ಗೊತ್ತು.

ಆ ” ಚಂದಮಾಮ ” ಬಲ್ಲ.

ಧರೆ ಬಲ್ಲಳು.

ಪ್ರೀತಿ – ತ್ಯಾಗ – ಸಹನೆ – ಧೈರ್ಯ – ಕಳಕಳಿಯ ರೂಪ ಅವಳು.

ಸಂಪೂರ್ಣ ಸ್ತ್ರೀ ಆದಾಗ ತನ್ನನ್ನು ಮರೆಯುತ್ತಾಳೆ. ಬರುವ ಕಂದನನ್ನು ಮರೆತೂ ಮರೆಯಳು.

ಒಂದೊಂದು ಕ್ಷಣವನ್ನೂ ಅನುಭವಿಸುತ್ತಾಳೆ. ಕಲ್ಪನೆ – ಸ್ಪರ್ಶ – ನೋವುಗಳು ಒಟ್ಟೊಟ್ಟಿಗೆ ಒಂದು ಆ ಕೃತಿಯ ರಚನೆಯನ್ನು ಎಳೆ ಎಳೆಯಾಗಿ ಬಿಡಿಸಿಕೊಳ್ಳುತ್ತಾಳೆ. ಹೊಟ್ಟೆ ತುಂಬಿದ್ದರೂ ತುಸು ಹೆಚ್ಚಾಗಿಯೇ ಆಹಾರವನ್ನು ತೆಗೆದುಕೊಳ್ಳುತ್ತಾಳೆ. ಅಷ್ಟು ವರುಷ ತನಗಾಗಿ ತೋರದ ಕಾಳಜಿಯನ್ನು ಜೋಪಾನವಾಗಿ ಪ್ರಕಟಿಸುತ್ತಾಳೆ. ಬಾಳಿನಲ್ಲಿ ಬಂದು ಹೋದ ಕೆಲವೇ ಕೆಲವು ನೆನಪುಗಳನ್ನು ಆಹ್ವಾನಿಸಿಕೊಳ್ಳುತ್ತಾ ವಾಸ್ತವಿಕವಾಗಿ ಯಾವುದೇ ತೊಂದರೆ ಇದ್ದರೂ ಗಮನಿಸದೇ ಹಣನ್ಮುಖತೆಯೆಡೆಗೆ ಜಾರುತ್ತಾಳೆ.

ಎದ್ದಾಗ – ಬಿದ್ದಾಗ – ಒದ್ದಾಗ ಸದ್ದಾಗದಂತೆ ಅವಡುಗಚ್ಚುತ್ತಾಳೆ. ಮಗುವಿಗಾಗಿ ನಗುತ್ತಾಳೆ. ಸೃಷ್ಟಿಯಾದಾಗ ದೃಷ್ಟಿಸಿ ನೋಡುತ್ತಾ ಬಿಂಬ – ಪ್ರತಿಬಿಂಬ – ರೂಪ – ಅನುರೂಪಗಳ ಎಣಿಕೆಯ ಪ್ರಾಣಗಳನ್ನು ಕಣ್ಣಿನಲ್ಲಿ – ತುಟಿಯಲ್ಲಿ – ಕರಗಳಲ್ಲಿ – ಅಪ್ಪುಗೆಯಲ್ಲಿ – ಎದೆಯಲ್ಲಿ ತೋರುತ್ತಾಳೆ. ಹಗಲು – ರಾತ್ರಿ – ನಿದ್ದೆ – ಆಯಾಸಗಳು ಅಲ್ಲಿ ಇಲ್ಲ!

ಅಲ್ಲಿರುವುದು ಬರೀ ಪ್ರೀತಿ!!!

ತನಗಾಗಿ ಬಂದ ಮಗು ದೇವರು ಕೊಟ್ಟ ಹೂವು. ತಾಯ್ತನ ತುಂಬಿದ ಆ ಕಂದನನ್ನು ಎವೆಯಿಕ್ಕದೆ ಸಮಯದ ಪರಿವೆಯಿಲ್ಲದ ಕಣ್ತುಂಬಕೊಳ್ಳುತಾಳೆ..

ಆಕೆ ಅಮ್ಮ…….. !!

ಅಮ್ಮ ಮೊದಲೇ? ದೇವರು ಮೊದಲೇ?

ವೇದ ಹೇಳುತ್ತದೆ ಅಮ್ಮನೇ ದೇವರು!

ಆಕೆಗೆ ಮಗುವಿನ ನಾಡಿ ಮಿಡಿತ ಗೊತ್ತು. ಉಸಿರಿನ ವೇಗ ಕೊಂಬೆ ಬಲ್ಲದು. ಬಳ್ಳಿಗೆ ನೀರುಣಿಸುವಂತೆ ದೃಷ್ಟಿಯಾಗದಿರಲೆಂದು ಸೆರಗು ಮುಚ್ಚಿ ಅಮೃತ ಕುಡಿಸುತ್ತಾಳೆ. ಮಗು ನಿದ್ರಿಸುತ್ತೆ. ತಾಯಿಯಾ ಮನ – ತನು ಎಚ್ಚರವಿರುತ್ತೆ. ಮತ್ತೆ ಮತ್ತೆ ಏಳುತ್ತದೆ. ತಾಯಿ ಇಂಪಾದ ದನಿ; ತೂಗುವಾಗ ಮಧ್ಯದಲ್ಲಿ ಬೇಕಂತಲೇ ಅಳುವುದು. ಅಮ್ಮನ ಮೊಗ ಮತ್ತೆ ದಿಟ್ಟಿಸಲು ಆ ತಾಯಿಗೂ ಗೊತ್ತು ಮಗು ಆಟವಾಡುತ್ತಿದೆಯೆಂದು. ಆದರ ಜೊತೆ ಆ ಮಾತೃ ಹೃದಯವೂ ಆಟವಾಡುತ್ತದೆ.

ಮಧುರ ಸ್ವರ, ಹುಸಿ ಮುನಿಸು, ತೋರೆಗೊಡದ ನಗು ಇಬ್ಬರಿಗೂ ಬೇಕು. ಪ್ರಕೃತಿಯ ನಿಯಮದಂತೆ ಬೆಳೆಯುತ್ತದೆ. ಆದರೆ ಆ ತಾಯಿ ಅಲ್ಲಿಯೇ ನಿಲ್ಲುತ್ತಾಳೆ. ಕ್ರಮೇಣ ಮಾಡು ಮರೆತು ಬಿಡುತ್ತದೆ. ಗೆಳತಿ – ಸಂಗಾತಿ ದೊರೆತಾಗ ಅಮ್ಮನಿಂದ ಅದು ಬಹು ದೂರ.

ಮಾತೃ ಹೃದಯ ಮಮತೆಯಿಂದ ಮನದಲ್ಲಿ ಮಗುವಿಗೆ ಜೋಕಾಲಿ ತೂಗುತ್ತಲೇ ಇರುತ್ತಾಳೆ. ಅದು ನಿರಂತರ. ಅಂಥಹಾ ಕರುಣಾಮಯಿಯಾದ ತಾಯಿ ಋಣವನ್ನು ತೀರಿಸಲು ಅಸಾಧ್ಯ! ಆದುದರಿಂದ ಮುತ್ತೈದೆಯಾಗಿ ಮರಣ ಹೊಂದಿದ ತಾಯಿಗೆ ” ಅವಿಧವಾ ನವಮೀ ” ಯಂದೇ ಶ್ರಾದ್ಧ ಮಾಡಬೇಕು.

ಎಲ್ಲಿ ತಾಯಿಯ ಋಣದ ಪರಿಹಾರ ನೆನಿಸಿ 16 ಪಿಂಡಗಳನ್ನು ಇಡಲಾಗುತ್ತದೆಯೋ ಅದನ್ನು ನೆನೆಸಿಕೊಂಡಾಗ ಕರುಳು ಕಿವಿಚಿದಂತಾಗುತ್ತದೆ. ಕಲ್ಲೆದೆಯ ಮನಸ್ಸು ಕೂಡಾ ಕರಗುತ್ತದೆ. ನಿಮ್ಮ ತಂದೆ – ತಾಯಿಗಳು ನಿಮ್ಮನ್ನು ನೋಡಿಕೊಂಡಂತೆ ನೀವು ನಿಮ್ಮ ಮಕ್ಕಳನ್ನು ನೋಡಿಕೊಳ್ಳಲಾರಿರಿ. ಅವರು ತಮ್ಮ ಸುಖವನ್ನು ತ್ಯಾಗ ಮಾಡಿ ನಿಮಗೆ ಸುಖ ಕೊಟ್ಟರು. ಹೀಗಾಗಿ ಅರ್ಥ ತಿಳಿದು ಪಿಂಡ ಪ್ರದಾನ ಮಾಡಿ!!

ಶ್ರೀ ವೇದವ್ಯಾಸದೇವರು ” ವಾಯುಪುರಾಣ ” ದಲ್ಲಿ ಮಾತೃ ವೈಭವವನ್ನು ಕಣ್ಣಿಗೆ ಕಟ್ಟಿದಂತೆ ಹೇಳಿದ್ದಾರೆ. ವಾಯುಪುರಾಣದಲ್ಲಿ ತಾಯಿಯ ಶ್ರೀ ವೇದವ್ಯಾಸದೇವರು ತಾಯಿಯ ವೈಭವವನ್ನು ಸಜ್ಜನರ ಮಾಹಿತಿಗಾಗಿ…

ಗರ್ಭೇ ಚ ವಿಷಮೇ ದುಃಖಂ ವಿಷಮೇ ಭೂಮಿವರ್ತ್ಮನಿ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧ ।।

ನಾನು ಗರ್ಭದಲ್ಲಿರುವುದರಿಂದ ನಿನಗೆಷ್ಟು ಕಷ್ಟವಾಯಿತು? ಅತಿಥಿಗಳು ಮನೆಗೆ ಬಂದರೇನೇ ಮನೆಯವರ ಸ್ವಾತಂತ್ರ್ಯ ಹೋಗುವುದು. ಹೀಗಿರುವಾಗ ೯ ತಿಂಗಳು ನಿನ್ನೊಳಗೆ ಬಂದುದರಿಂದ ನಿನ್ನ ದೇಹಕ್ಕೆ ಎಷ್ಟೊಂದು ವಿಕಾರವಾಯಿತು ಮತ್ತು ದುಃಖವಾಯಿತು.

ಊಟವಾದಾಗ ತಿಂದಿದ್ದೆಲ್ಲಾ ವಾಂತಿ, ಹೊಟ್ಟೆ ಹೊತ್ತು ಸಮಾರಂಭದಲ್ಲಿ ಭಾಗವಹಿಸಲು ಆಗಲಿಲ್ಲ. ಮನೆ – ಸಮಾರಂಭ – ಸಮಾಜದಲ್ಲಿ ಮುಜುಗರವಾದರೂ ನನಗಾಗಿ ಅದನ್ನು ಸಹಿಸಿಕೊಂಡಿರುವ ನಿನಗೆ ನಮನ!

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ಯಾವತ್ಪುತ್ರೋ ನ ಭವತಿ ತಾವನ್ಮಾತುಶ್ಚ ಶೋಚನಮ್ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೨ ।।

ಗರ್ಭದಲ್ಲಿ ನಾನು ಹೊರಗೆ ಬರುವ ತನಕ ನಿನಗಾದ ಶೋಕಕ್ಕೆ ಕೊನೆಯಿಲ್ಲ. ಸಿಕ್ಕಾಪಟ್ಟಿ ತಿರುಗಾಡಲಾಗದು. ಮಗುವಿಗೆ ಏನಾದೀತೋ ಎಂಬ ಭಯ. ಅಡ್ಡಾದಿಡ್ಡಿಯಾಗಿ ಬಂದರಂತೂ ನನಗಾಗಿ ನಿನ್ನ ಪ್ರಾಣವೇ ಹೋದರೆ ಎಂಬ ಭಯ ಬೇರೇ.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ಶೈಥಿಲ್ಯೇ ಪ್ರಸವೈ: ಪ್ರಾಪ್ತೆ ಮಾತಾ ವಿಂದಂತಿ ತತ್ಕೃತಂ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೩ ।।

ತಾಯಿಯಾದ್ದರಿಂದ ನಿನ್ನ ದೇಹ ಸೌಷ್ಠವ ಹಾಳಾಗುತ್ತದೆ. ಹಾಳಾದರಾಗಲಿ ಮಗು ಮುದ್ದಾಗಿರಬೇಕು ಎಂದು ನನಗಾಗಿ ನಿನ್ನ ತ್ಯಾಗ ಎಷ್ಟು ದೊಡ್ಡದು. ನಾನು ಇದ್ದುದ್ದು ೯ ತಿಂಗಳು. ನೀ ಒದ್ದಾಡಿದ್ದು ಅದಕ್ಕಾಗಿ ಜೀವನ ಪರ್ಯಂತ!

ಪ್ರೇಮಮಯಿಯೇ ಆದರೂ ನನ್ನನ್ನು ನೀನು ನಲಿವಿನಿಂದ ಕಾಪಾಡಿದೆ!

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ಸಂಪೂರ್ಣೇ ದಶಮೇ ಮಾಸೀ ಮಾತಾ ಕ್ರಂದಂತಿ ದುಷ್ಕೃತಂ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೪ ।।

ತಿಂಗಳು ತುಂಬಿದಂತೆ ನಾನಂತೂ ಗರ್ಭದಲ್ಲಿ ಬೆಳೆಯುತ್ತಿದ್ದೆ. ನಿನ್ನ ಚಿಂತೆ, ಯೋಚನೆ ದುಪ್ಪಟ್ಟು ಬೆಳೆಯುತ್ತಿತ್ತು. ನೀನು ಆಗ ಯಾರ ಬಳಿ ಹೇಳಿಕೊಳ್ಳದೆ ಒಳಗೊಳಗೆ ಅತ್ತೆ. ನಾನು ಸತ್ತರೂ ಸರಿ ಮಗು ಬದುಕಿದರೆ ಸಾಕು ಎಂದುಕೊಂಡಿ

ಅಮ್ಮಾ! ಆ ನಿನ್ನ ತ್ಯಾಗಕ್ಕೆ ನಾನೇನು ನೀಡಲಿ!

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ದಿವಾ ರಾತ್ರೌ ಚ ಯಾ ಮಾತಾ ಸ್ತನಂ ದತ್ವಾ ಚ ಪಾಲಿತಾ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೫ ।।

ಹಗಲೂ ರಾತ್ರಿ ಹಾಲಿಗಾಗಿ ಅತ್ತೆ. ನಿನ್ನ ಸವಿ ನಿದ್ದೆ ಧ್ವಂಸವಾಯಿತು. ಆದರೂ ನನಗೆ ಹಾಲು ನೀಡಿ ನನ್ನ ಓಲೈಸಿದೆ. ನಿನ್ನ ನಿದ್ದೆ ಹಾಳಾದರೂ ನಾನು ಮತ್ತೆ ಮಲಗಿದ್ದ ಕಂಡು ಒಳಗೊಳಗೇ ಖುಷಿ ಪಟ್ಟೆ! ಅಮ್ಮಾ ನಿನ್ನ ಋಣಕ್ಕೆ ಸರಿಸಾಟಿ ಏನಿದೆ?

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ಅಗ್ನಿನಾ ಶೋಚ್ಯತೇ ದೇಹೇ ತ್ರಿರಾತ್ರೋ ಪೋಷಣೇನ ಚ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೬ ।।

ನಾನು ಹಾಲು ಕುಡಿದಾಗ ಶೀತ ಹೋಗಿ ನಿನ್ನ ದೇಹವೇ ಉಷ್ಣವಾಗುತ್ತಿತ್ತು. ಆದರೂ ನೀನು ಹಾಲು ಕುಡಿಸುವುದು ನಿಲ್ಲಿಸಲಿಲ್ಲ. ದೇಹ ಬಿಸಿ ಕಾಪಾಡಿ ಬಿಸಿ ಬಿಸಿ ಹಾಲು ಕೊಟ್ಟೆ. ಆದರೆ ಈಗ ನಾನು ಅದನ್ನು ನೆನಿಪಿಸಿ ಋಣ ಪರಿಹಾರಕ್ಕಾಗಿ ಪಿಂಡ ಪ್ರದಾನ ಮಾಡುತ್ತಿರುವೆ ಅಮ್ಮಾ!

ರಾತ್ರೌ ಮೂತ್ರ ಪರೀಷಾಭ್ಯಾ೦ ಭಿದ್ಯತೇ ಮಾತೃಕರ್ಪಟೈ: ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೭ ।।

ರಾತ್ರಿ ಮಲ ಮೂತ್ರ ವಿಸರ್ಜಿಸಿ ಅತ್ತೆ. ಆಗ ನಿನ್ನ ನಿದ್ದೆ ಹಾಳಾಯಿತು. ಹಾಸಿಗೆಯೆಲ್ಲಾ ಒದ್ದೆ. ದುರ್ಗಂಧ ಮುಜುಗರ ಎಲ್ಲಾ ನಿನಗೆ ತಂದೆ. ಕಸ ಮಾಡಿದ ನನ್ನನ್ನು ನೀನು ತಳ್ಳದೇ ಎತ್ತಿಕೊಂಡೆ. ಅಸಹ್ಯ ಮಾಡಿದ ನನ್ನನ್ನು ಎತ್ತಿಕೊಂಡೆ. ತೊಡೆ ಏರಿದ ನಾನು ನಿನ್ನ ಸೀರೆಯನ್ನೆಲ್ಲಾ ತೋಯಿಸಿದೆ. ಆದರೆ ನೀನು ಬೇಸರ ಮಾಡಿಕೊಳ್ಳದೆ ನನ್ನ ಬೆಚ್ಚಿಗಿಟ್ಟೆ. ಇದು ನಿನ್ನ ದಿನಗಟ್ಟಲೆಯಲ್ಲ! ವರ್ಷಗಟ್ಟಲೆ ನನಗೆ ಹರ್ಷ ತಂದು ಕೊಟ್ಟೆ.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ.

ಮಾಸಿ ಮಾಸಿ ವಿದಾಘೇ ಚ ಶರೀರ ತಾಪ ದುಃಖಿತಾ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೮ ।।

ಚಳಿ, ಬಿಸಿಲು, ಮಳೆ, ಗಾಳಿಯಿಂದ ಋತು ಬದಲಾದಂತೆ ನನ್ನ ಆರೋಗ್ಯ ಏರು ಪೇರಾಯಿತು ಆದರೂ ನನ್ನನ್ನು ಹೆಗಲೇರಿಸಿ ಕೊಳ್ಳುವುದನ್ನು ನೀನು ಬಿಡಲಿಲ್ಲ. ನಿನಗೆ ಜ್ವರ ಬಂದರೂ ನನ್ನನ್ನು ಜೋಪಾನ ಮಾಡಿದೆ. ಚಳಿ ಆದರೂ ನೀನು ನನ್ನ ಬಳಿಯೇ ಇದ್ದೆ.

ಅಮ್ಮಾ! ನನಗಾಗಿ ನೀನು ನರಳಿದೆ.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಗಾತ್ರಭಂಗೋ ಭವೇನ್ಮಾತು: ಘೋರ ಬಾಧೇ ಪ್ರಪೀಡಿತೇ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೯ ।।

ನಾನು ನಿನಗೆಷ್ಟು ಬಾರಿ ತುಂಟತನ ಮಾಡಿಲ್ಲ. ನಾನೇನೋ ನಿನ್ನ ದೇಹದ ಮೇಲೆ ಕಾಲಿನಿಂದ ನಲಿದೆ. ನನಗೆ ನಲಿವು. ನಿನಗೆ ನೋವು. ಆದರೂ ನೀನು ನನ್ನನ್ನು ಕೆಳಗಿಳಿಸಲಿಲ್ಲ. ಬದಿಗಿಡಲಿಲ್ಲ. ಬಾಧೆ ಬಂದರೂ ಸಹ ಪೀಡೆಯಾದರೂ ಸಹಾ ಪ್ರೀತಿಸಿದೆ.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಪಾದಾಭ್ಯಾ೦ ಜನಯೇತ್ಪುತ್ರೋ ಜನನೀ ಪರಿವೇದನಮ್ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧೦ ।।

ಗರ್ಭದಲ್ಲಿದ್ದಾಗ ನಿನಗೆ ಒದ್ದೆ. ಮಗುವಾಗಿದ್ದಾಗ ಕಾಲಿಂದ ಜಾಡಿಸಿದೆ. ಬೆಳೆದ ನಂತರವೂ ನಿನಗೆ ಕಾಲು ತೋರಿಸಿದ್ದುಂಟು. ನೀ ಮಾಡಿದ್ದೆಲ್ಲಾ ಕಾಲು ಕಸ ಎಂದು ಕಡೆಗಾಣಿಸಿದೆ. ಕಾಲಿಂದ ನಿನಗೆ ಕೊನೆಗಾಣದ ಕಂಬನಿ ನೀಡಿದೆ. ಅಮ್ಮಾ ನನ್ನ ತುಂಟತನದಿಂದ ನಿನ್ನನ್ನು ಗೋಳಾಡಿಸಲಿಲ್ಲವೇ?

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಅಲ್ಪಾಹಾರಗತಾ ಮಾತಾ ಯಾವತ್ಪುತ್ರೋsಸ್ತಿ ಬಾಲಕಃ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧೧ ।।

ಅಂದು ನಾನು ಮಲಗಿದ್ದಾಗ ನನಗಾಗಿ ನಿನ್ನ ಊಟದ ಸಮಯ ಎಷ್ಟು ಬಾರಿ ಮುಂದೆ ಹೋಗಿಲ್ಲವೇ? ತೊಡೆಯ ಮೇಲೆ ಮಲಗಿಕೊಂಡಾಗ ನಿನ್ನ ಊಟಕ್ಕೆ ಅಡ್ಡಿಯಾಗಲಿಲ್ಲವೇ? ಊಟದ ವೇಳೆಯಲ್ಲಿ ಮಲ ವಿಸರ್ಜನೆ ಮಾಡಿ ನಿನಗೆ ಮುಜುಗರ ಮಾಡಲಿಲ್ಲವೇ?

ಬಡತನದಲ್ಲಿ ನನಗಾಗಿ ಊಟ ಮಾಡದೇ ನೀನು ಉಪವಾಸ ಮಲಗಿರಬಹುದು. ಮತ್ತಾರು ಅಡಿಗೆ ಮಾಡುವವರು ಎಂದು ಹಾಗೆಯೇ ಮಲಗಿರಬಹುದು. ಊಟದ ವೇಳೆ ರಂಪ ಮಾಡಿ ಎಷ್ಟು ಬಾರಿ ನಿನ್ನ ಊಟ ತಪ್ಪಿಸಲಿಲ್ಲ?

ಅಂತೂ ಅಲ್ಪನಾದ ನನ್ನಿಂದ ನಿನ್ನ ಆಹಾರ ಸ್ವಲ್ಪವಾಯಿತು. ನೆನಿಸಿಕೊಂಡಾಗ ಮನಸ್ಸು ಸಂಕೋಚದ ಮುದ್ದೆಯಾಗುವುದು.

ಅದರ ಮುಂದೆ ಪಿಂಡ ರೂಪವಾದ ಅನ್ನದ ಮುದ್ದೆ ಕೇವಲ ಸಾಂಕೇತಿಕ ಅಲ್ಲವೇ?

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಪಿಬಂತಿ ಕಟುಕ ದ್ರವ್ಯ೦ ಮಾತಾ ಯಸ್ಯ ಹಿತಾಯ ಚ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧೨ ।।

ಬೇಗ ಪ್ರಸವವಾಗಲೀ ಎಂದು ಕಹಿಯ ” ಜೀರಿಗೆ ಕಷಾಯ ” ಕುಡಿದೆ. ಮಗುವಿಗೆ ನೆಗಡಿಯಾಗದಿರಲಿ ಎಂದು ” ಮೆಣಸಿನ ಸಾರು ” ನೀ ಕುಡಿದೆ. ಮಗುವಿಗೆ ಆರೋಗ್ಯವಿರಲಿ ಎಂದು ತಲೆಗೆಲ್ಲಾ ಸುತ್ತಿಕೊಂಡು ಒದ್ದಾಗಿದೆ.

ನಾನು ಬರುವ ತನಕ ನಿನಗೆ ಬಂಧನ. ಬಂದ ಮೇಲೆ ಆಹಾರ ನಿಬಂಧನ. ಆದರೂ ತಪ್ಪಲಿಲ್ಲ ನಿನ್ನ ಪ್ರೀತಿಯ ಬಾಹು ಬಂಧನ. ಎರಡೂ ಕೈಯಿಂದ ಎರಡು ಮಾತಾಡದೇ ಮಾಡಿರುವ ಸೇವೆಗೆ ಒಂದೇ ಕೈಯಿಂದ ಪಿಂಡ ಪ್ರದಾನ ಮಾಡುವುದು ನಿಜವಾಗಲೂ ಋಣ ತೀರಿಸಲು ಅಲ್ಲ! ಕರ್ತವ್ಯದ ಸಂಕೇತಕ್ಕಾಗಿ! ನನಗಾಗಿ ನೀನು ಔಷಧ ಕುಡಿದೆ. ನಿದ್ದೆ ಗೆಟ್ಟು ನೀನು ಒದ್ದಾಡಿದೆ.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಪುತ್ರೋ ವ್ಯಾಧಿ ಸಮಾಯುಕ್ತೋ ಮಾತಾಕ್ರಂದನಕಾರಿಣೇ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧೩ ।।

ನನಗೆ ರೋಗ ಬಂದಾಗ ಅತ್ತು ದೇವರಲ್ಲಿ ಬೇಡಿ ಔಷಧಿಗಾಗಿ ಅಲೆದಾಡಿ ರಾತ್ರಿ ನಿದ್ದೆ ಗೆಟ್ಟಿದ್ದು ನೀನು. ನಾನು ಅಳುವುದಕ್ಕೆ ಮೊದಲು ನೀನು ಅತ್ತೆ. ತಿಳುವಳಿಕೆಯಿಲ್ಲದ ನನಗಾಗಿ ನೀನು ಅಷ್ಟು ಮಾಡಿರುವಾಗ ಈಗ ನಾನು ನಿನಗೆ ಏನು ಕೊಡಲಿ?

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಮಾಸೇ ಮಾಸೇ ಕೃತಂ ಕಷ್ಟ೦ ವೇದನಾ ಪ್ರಸವೇಷು ಚ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧೪ ।।

ತಿಂಗಳು ಉರುಳುತ್ತಿದ್ದಂತೆ ನಿನ್ನ ಮುಜುಗರ ಹೆಚ್ಚಾಯಿತು. ಮಗು ಬರುವ ತನಕ ಹೆಜ್ಜೆ ಹೆಜ್ಜೆಗೂ ಗಾಬರಿ. ಬರುವ ದಿನ ಬದುಕುವುದೇ ಕಷ್ಟ. ತಾಯಿಯಾದ ನೀನು ಸತ್ತರೂ ಪರವಾಗಿಲ್ಲ ಮಗು ಬದುಕಿದರೆ ಸಾಕು ಎಂದು ಒದ್ದಾಡಿದವಳು ನೀನು.

ನಾನು ಬಂದ ಮೇಲೆ ನಿನಗೆ ಎತ್ತಿಕೊಳ್ಳುವ ಭಾರ. ನನಗಾಗಿ ಮೆಲ್ಲಗೆ ನಡೆಯುವ ದಾಕ್ಷಿಣ್ಯ. ಬೆಳೆಯುವಾಗ ನನ್ನನ್ನು ಬೆಳೆಸಲು ನೀನು ಒಳವೊಳಗೆ ಒದ್ದಾಡಿದ್ದು.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಯಮದ್ವಾರೇ ಪಥೇ ಘೋರೇ ಮಾತುಶ್ಚ ಶೋಚನಮ್ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧೫ ।।

ನನಗಾಗಿ ನೀನು ಎಷ್ಟು ಕಷ್ಟ ಅನುಭವಿಸಿಲ್ಲ? ಸಾಯುವಾಗ ನಿನಗೆ ಎಂಥಾ ವೇದನೆ ಆಗಿರಬಹುದು? ಆಗ ನಾನು ಬಲಿಯಲ್ಲಿರಲಿಲ್ಲ. ಇದ್ದರೂ ಏನು ಮಾಡಬೇಕೆಂದು ತೋಚಲಿಲ್ಲ.

ಬದುಕಿನಲ್ಲೂ, ಸಾವಿನಲ್ಲೂ ನೋವನ್ನುಂಡು, ನಲಿವು ತಂದ ನಲ್ಮೆಯ ತಾಯಿ ನೀನು. ನೀನು ದೂರವಾಗಿ ಯಮಲೋಕದ ದಾರಿಯಲ್ಲಿ ಮಕ್ಕಳೇನಾದರೂ ಮಾಡಿಯಾರೆಂದು ಮೂಟೆಯಷ್ಟು ಆಸೆ ಹೊತ್ತಿರಬಹುದು. ಮೂರ್ಖರಾದ ನಾವು ಈಗ ನೇಣಿಪಿಸಿಕೊಳ್ಳುತ್ತಿದ್ದೇವೆ.

ತಾಯಿ ಆಗ ಆದ ನಿರಾಶೆ ದುಃಖಗಳಿಗೆ ದುಡ್ಡು – ಮಾತು ಯಾವುದೂ ಪರಿಹಾರವಲ್ಲ. ನಾಚಿಕೆಯಿಂದ ಮನಸ್ಸು ಸಂಕೋಚದ ಮುದ್ದೆಯಾಗಿದೆ. ಕೈಹಿಸುಕಿ ಕೊಳ್ಳುವಷ್ಟು ಇಡೀ ಜೀವ ಹಿಡಿಯಾಗಿದೆ. ಹೀಗಾಗಿ ನಾನು ಕೈಯಿಂದ ಈ ಪಿಂಡವನ್ನು ಸಾಂಕೇತಿಕವಾಗಿ ನೀಡುತ್ತಿರುವೆ. ನನ್ನನ್ನು ಕ್ಷಮಿಸು!

ಮಾತೃ ಋಣದಿಂದ ಮೋಚನೆಗೊಳಿಸು. ಅಮ್ಮಾ! ದೇವರ ಸ್ಮರಣೆಯಿಂದ ನನ್ನ ಮಾನವ ಜನ್ಮ ಸಾರ್ಥಕವೆನಿಸು.

ಯಾವತ್ಪುತ್ರೋ ಗಯಾ೦ ಗತ್ವಾ ಶ್ರಾದ್ಧ೦ ಕುರ್ಯಾತ್ ವಿಧಾನತಃ ।

ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ।। ೧೬ ।।

ತಾಯಿಯಾದ ನಿನ್ನ ಮರಣದ ನಂತರ ಮಗನು ” ಮಾತೃ ಗಯಾ ” ಕ್ಕೆ ಹೋಗಿ ವಿಧಿ ವಿಧಾನ ಪೂರ್ವಕವಾಗಿ ಶ್ರಾದ್ಧ ಮಾಡುತ್ತಾನೆ ಎಂದು ಭಾರೀ ಆಸೆ ಹೊತ್ತುಕೊಂಡಿದ್ದಿ. ನಾನು ವಿಳಂಬವಾಗಿ ಈಗ ಅದನ್ನು ಪೂರಸುತ್ತಿರುವೆ.

ಅಮ್ಮಾ! ದೇವರ ಸ್ಮರಣೆಯಿಂದ ನನ್ನ ಮಾನವ ಜನ್ಮ ಸಾರ್ಥಕವೆನಿಸು. ಹತ್ತಾರು ಅಪರಾಧಗಳು ಅಳಿಸಲೆಂದು ೧೬ ಪಿಂಡಗಳನ್ನು ನಾ ನೀಡಿರುವೆ!!

ಇಂಥಾ ಶ್ರೇಷ್ಠ ಸ್ಥಾನದಲ್ಲಿರುವ – ನಮಗಾಗಿ ಅನೇಕ ಕಷ್ಟಗಳನ್ನು ಎದುರಿಸಿ ನನ್ನನ್ನು ಉತ್ತಮ ಸ್ಥಾನದಲ್ಲಿ ನಿಲ್ಲುವಂತೆ ಮಾಡಿ ಸಮಾಜ ಮೆಚ್ಚುವಂಥಾ ವ್ಯಕ್ತಿಯನ್ನಾಗಿ ಮಾಡಿದ ತಾಯಿಗೆ ಭಕ್ತಿ ಶ್ರದ್ಧೆಗಳಿಂದ ಪಿಂಡ ಪ್ರದಾನ ಪೂರ್ವಕ ಶ್ರಾದ್ಧ ಕರ್ಮ ಮಾಡಿ ತಾಯಿಯ ಆಶೀರ್ವಾದಕ್ಕೆ ಪಾತ್ರರಾಗೋಣ…

ಪಲ್ಲವಿ ನಾಗರಾಜು ಹಾವೇರಿ

​ಶ್ರಾದ್ಧದ ಮಹತ್ವ

​ಶ್ರಾದ್ಧದ ಮಹತ್ವ

” ಶ್ರಾದ್ಧ ” ಯೆಂದರೆ…

” ಶ್ರದ್ಧಯಾ ಕ್ರೀಯತೇ ಕರ್ಮ ಇತಿ ಶ್ರಾದ್ಧಮ್ ” – ಶ್ರದ್ಧೆಯಿಂದ ಆಚರಿಸುವ ಕಾರ್ಯವೇ ” ಶ್ರಾದ್ಧ ” ಎಂದು ಕರೆಸಿಕೊಳ್ಳುತ್ತದೆ. ಅತ್ಯಂತ ನಿಷ್ಠೆಯಿಂದ ಪಿಂಡ ಪ್ರದಾನ ಮಾಡಿ ಪಿತೃ ದೇವತೆಗಳ ಅಂತರ್ಯಾಮಿಯಾದ ಶ್ರೀ ಜನಾರ್ದನ ರೂಪಿ ಭಗವಂತನನ್ನು ತೃಪ್ತಿ ಪಡಿಸಬೇಕು. ಇದರಿಂದ ತನ್ನ ಪಿತೃಗಳಿಗೆ ಸದ್ಗತಿಯು ದೊರೆಯಲಿದೆಯೆಂದು ಪ್ರಾರ್ಥಿಸಬೇಕು.

ಕರ್ಮಭೂಮಿ ಯೆನಿಸಿದ ಈ ಭರತ ಖಂಡದ ಸನಾತನ ಧರ್ಮಗಳಲ್ಲಿ ” ಶ್ರಾದ್ಧ ” ಕರ್ಮವು ಮುಖ್ಯವಾಗಿದೆ. ಇದು ಅತ್ಯಂತ ಶ್ರೇಯಸ್ಕರವಾದ ಕರ್ಮವಾಗಿದೆ. ಇದನ್ನು ” ಪಿತೃ ಯಜ್ಞ ” ಎಂದು ಕರೆಯುತ್ತಾರೆ.

” ಬ್ರಹ್ಮಾಂಡ ಪುರಾಣ ” ದಲ್ಲಿ…

ಪಿತೃನ್ಯೂದ್ಧಿಶ್ಯ ವಿಪ್ರೇಭ್ಯೋ ದತ್ತಾಂ ಶ್ರಾದ್ಧಮುದಾಹೃತಮ್ ।।

ನಮ್ಮ ಜನ್ಮಕ್ಕೆ ಕಾರಣರಾಗಿ, ನಮ್ಮನ್ನು ಹೆತ್ತು – ಹೊತ್ತು – ಸಾಕಿ – ಸಲುಹಿ ನಮ್ಮ ಉದ್ಧಾರಕ್ಕೆ ಶ್ರಮಿಸಿ, ನಮ್ಮನ್ನಗಲಿ ಹೋದ ತಂದೆ – ತಾಯಿ – ಹಿರಿಯರು ಮುಂತಾದವರನ್ನು ಸ್ಮರಿಸಿ, ಅವರನ್ನು ಕುರಿತು ಶ್ರದ್ಧೆಯಿಂದ ಅನ್ನ – ಜಲಾದಿಗಳನ್ನು ಕೊಡುವ ಪಿತೃ ಕಾರ್ಯಕ್ಕೆ ” ಶ್ರಾದ್ಧ ” ಎಂದು ಹೆಸರು.

” ಶ್ರಾದ್ಧ ಕಲ್ಪಲತಾ ” ದಲ್ಲಿ….

ಪಿತೃನುದ್ಧಿಶ್ಯೇನ ಶ್ರದ್ಧಯಾ ತ್ಯಕ್ತಸ್ಯ ದ್ರವ್ಯಸ್ಯ ।

ಬ್ರಾಹ್ಮಣೈರ್ಯತ್ಸ್ವೀಕರಣಂ ತತ್ ಶ್ರಾದ್ಧಮ್ ।।

ಪಿತೃಗಳನ್ನುದ್ಧೇಶಿಸಿ ಶ್ರದ್ಧೆಯಿಂದ ಕೊಡಲ್ಪಟ್ಟ ದ್ರವ್ಯವನ್ನು ಬ್ರಾಹ್ಮಣರು ಸ್ವೀಕರಿಸುವುದಕ್ಕೆ ” ಶ್ರಾದ್ಧ ” ಎಂದು ಹೆಸರು.

ಒಟ್ಟಿನಲ್ಲಿ ಶ್ರದ್ಧೆಯಿಂದ ತನಗೆ ಪ್ರಿಯವಾದ ಭೋಜ್ಯವನ್ನು ತನ್ನ ಪಿತೃಗಳನ್ನುದ್ಧೇಶಿಸಿ ಕೊಡುವ ” ಪಿಂಡ ಪ್ರದಾನ ” ಕ್ರಿಯೆಗೆ ” ಶ್ರಾದ್ಧ ” ಎಂದು ಹೆಸರು.

ಇಲ್ಲಿ ಕೆಲವರು ಪ್ರಶ್ನೆ ಮಾಡುವುದುಂಟು…

ನಮ್ಮನ್ನಗಲಿ ಹೋದ ಪಿತೃಗಳಿಗೆ ನಾವು ಕೊಡುವ ಜಲಾಂಜಲಿ – ಪಿಂಡ ಪ್ರಧಾನದಿಂದ ತೃಪ್ತಿಯಾಗುವುದು ಹೇಗೆ? ಅವರಿಗೆ ನಾವು ಕೊಟ್ಟಿದ್ದು ತಲುಪುವುದು ಹೇಗೆ?

ಇದಕ್ಕೆ ಉತ್ತರ ಹೀಗಿದೆ…

ನಾವು ಕೊಟ್ಟ ಅನ್ನವನ್ನು ಅಂದರೆ…

ಅದರ ಸಾರ ಭಾಗವನ್ನು ವಸು – ರುದ್ರ – ಆದಿತ್ಯ ತದಂತರ್ಗತ ಭಾರತೀ ರಾಮಣ ಮುಖ್ಯಪ್ರಾಣಾಂತರ್ಗತ ಪ್ರದ್ಯುಮ್ನ – ಸಂಕರ್ಷಣ – ವಾಸುದೇವ ರೂಪಿ ಭಗವಂತನು ಸ್ವೀಕರಿಸಿ ಅದನ್ನು ನಮ್ಮ ಪಿತೃಗಳು ಯಾವ ಯೋನಿಯಲ್ಲಿ ಎಲ್ಲಿ ಇರುವರೋ ಅಲ್ಲಿ ಅವರಿಗೆ ಆಹಾರ ರೂಪವಾಗಿ ಸೂಕ್ತ ರೀತಿಯಲ್ಲಿ ಕೊಟ್ಟು ಸಂತೋಷ ಪಡಿಸುತ್ತಾನೆ.

ಶ್ರಾದ್ಧ ಕರ್ತೃವಿನ ತಂದೆಯು / ಪಿತೃಗಳು ದೇವತ್ವವನ್ನು ಹೊಂದಿದ್ದರೆ ಆ ಅನ್ನವು ಅಮೃತವಾಗಿ, ಪಶುವಾಗಿದ್ದರೆ ಹುಲ್ಲಾಗಿ, ಸರ್ಪವಾಗಿದ್ದರೆ ವಾಯು ರೂಪವಾಗಿ, ಹದ್ದು ಮೊದಲಾದವಾಗಿದ್ದರೆ ಮಾಂಸವಾಗಿ, ಮನುಷ್ಯನಾಗಿದ್ದರೆ ಯೋಗ್ಯ ಅನ್ನವಾಗಿ ಅವರಿಗೆ ತಲುಪುತ್ತದೆ.

ಪಿತೃಗಳ ( ತಂದೆ – ತಾಯಿ – ಹಿರಿಯರು ) ತೃಪ್ತಿಗಾಗಿ ಶ್ರಾದ್ಧ ಕರ್ಮವನ್ನು ಮಾಡಲೇಬೇಕು ಎಂದು ” ಕೂರ್ಮ ಪುರಾಣ ” ದಲ್ಲಿ…

ಶ್ರಾದ್ಧಾತ್ಪರಾತ್ಪರಾನ್ನಾಸ್ತಿ ಶ್ರೇಯಸ್ಕರ ಮುದಾಹೃತಮ್ ।

ತಸ್ಮಾತ್ ಸರ್ವ ಪ್ರಯತ್ನೇನ ಶ್ರಾದ್ಧ೦ ಕುರ್ಯಾದ್ವಿಚಕ್ಷಣಃ ।।

ಮಾನವರಿಗೆ ತಮ್ಮ ಪಿತೃಗಳ ಶಾಸ್ತ್ರೋಕ್ತವಾದ ಶ್ರಾದ್ಧ ಕರ್ಮಕ್ಕಿಂತ ಶ್ರೇಯಸ್ಕರವಾದ ಕಾರ್ಯವು ಯಾವುದೂ ಇಲ್ಲ. ಆದುದರಿಂದ ವಿವೇಕಿಗಳೂ; ಜ್ಞಾನಿಗಳೂ ಸರ್ವ ಪ್ರಯತ್ನದಿಂದ ಶ್ರಾದ್ಧವನ್ನು ಮಾಡಬೇಕು.

” ಯಮ ಸ್ಮೃತಿ ”

ಯೇ ಯಜಂತಿ ಪಿತೃನ್ ದೆವಾನ್ ಬ್ರಾಹ್ಮಣಾ: ಸರ್ವ ಕಾಮದಾನ್ ।

ಸರ್ವ ಭೂತಾಂತರಾತ್ಮಾನ್ ವಿಷ್ಣುಮೇವ ಯಜಂತಿ ತೇ ।।

ಯಾವ ಬ್ರಾಹ್ಮಣನು ಎಲ್ಲಾ ಇಷ್ಟಾರ್ಥವನ್ನು ಕೊಡುವವರಾದ ಪಿತೃಗಳನ್ನೂ; ದೇವತೆಗಳನ್ನೂ ಪೂಜಿಸುವರೋ ಅವರು ಎಲ್ಲಾ ಚೇತನಾಚೇತನಾತ್ಮಕವಾದ ಪ್ರಪಂಚಕ್ಕೆ ನಿಯಾಮಕನಾದ ಶ್ರೀ ಮಹಾವಿಷ್ಣುವನ್ನೇ ಪೂಜಿಸುತ್ತಾರೆ!!

ಶ್ರಾದ್ಧ ಕರ್ಮವನ್ನು ಮಾಡದಿದ್ದರೆ ಏನಾಗುತ್ತದೆ? ಎಂದು ಕೇಳುವವರಿಗೆ..

” ಹಾರಿತ ಸ್ಮೃತಿ ” ಯು ಹೀಗೆ ಉತ್ತರಿಸುತ್ತದೆ…

ನ ಸಂತಿ ಪಿತರಶ್ಚೇತಿ ಕೃತ್ವಾ ಮನಸಿ ಯೋ ನರಃ ।

ಶ್ರಾದ್ಧ೦ ನ ಕುರುತೇ ತತ್ರ ತಸ್ಯ ರಕ್ತ೦ ಪಿಬಂತಿ ತೇ ।।

ಯಾವ ಮನುಷ್ಯರು ಪಿತೃಗಳೂ ಅಥವಾ ತಂದೆ – ತಾಯಿಗಳ ದೇಹವನ್ನು ಸುಟ್ಟು ಭಸ್ಮ ಮಾಡಿದ ಮೇಲೆ ಅವರಿಗೆ ಹೊಟ್ಟೆ ಇಲ್ಲ ಎಂಬ ಭಾವನೆಯಿಂದ ಪಿತೃಗಳ ಶ್ರಾದ್ಧಾದಿಗಳನ್ನು ಮಾಡುವುದಿಲ್ಲವೋ ಅಂಥವರ ಪಿತೃಗಳು ಸಿಟ್ಟಾಗಿ ನಾಸ್ತಿಕರ ರಕ್ತವನ್ನು ಕುಡಿಯುತ್ತಾರೆ.

ಇನ್ನು ಶ್ರಾದ್ಧವನ್ನು ಮಾಡುವವರು ನ್ಯಾಯದಿಂದ ಹಣದಿಂದಲೇ ಮಾಡಬೇಕೆಂದು ” ಮಾರ್ಕಂಡೇಯ ಪುರಾಣ ” ಈ ಕೆಳಗಿನಂತೆ ಖಚಿತ ಪಡಿಸಿದೆ.

ಅನ್ಯಾಯೋಪಾರ್ಜಿತೈರ್ವಿತ್ತೈ: ಯತ್ ಶ್ರಾದ್ಧ೦ ಕ್ರೀಯತೇ ನರೈ: ।

ತೃಪ್ಯಂತಿ ತೇನ ಚಾಂಡಾಲಾ: ಪುಲ್ಕಸಾದ್ಯಾಶ್ಚಯೋನಯಃ ।।

ಮಾನವರು ಅನ್ಯಾಯ – ಅಧರ್ಮದಿಂದ ಹಣವನ್ನು ಗಳಿಸಿ ಅದರಿಂದ ಶ್ರಾದ್ಧ ಮಾಡಿದರೆ ಆ ಶ್ರಾದ್ಧದಿಂದ ಚಾಂಡಾಲ – ಪುಲಸ್ಕ ( ಬ್ರಾಹ್ಮಣನಿಗೆ ಕ್ಷತ್ರೀಯ ಜಾತಿಯಲ್ಲಿ ಹುಟ್ಟಿದ ಮಿಶ್ರ ಜಾತಿಯವ ) ಮುಂತಾದ ಪಾಪಿಗಳಿಗೆ ತೃಪ್ತಿಯಾಗುವುದೇ ಹೊರತು ಪಿತೃಗಳಿಗೆ ತೃಪ್ತಿಯಾಗುವುದೇ ಇಲ್ಲ!!

*********

ಈ ಪವಿತ್ರವಾದ ಪಿತೃ ಯಜ್ಞದಲ್ಲಿ ಶ್ರೀ ಜನಾರ್ದನ ರೂಪಿಯಾದ ಶ್ರೀ ಪರಮಾತ್ಮನನ್ನೇ ” ಶ್ರಾದ್ಧಾ ಸ್ವಾಮಿ ” ಎಂದು ಭಾವಿಸಿಬೇಕು.

ಶ್ರಾದ್ಧದಲ್ಲಿ ಬಳಸುವ ಎಳ್ಳು – ದರ್ಭೆ ಮೊದಲಾದ ಪದಾರ್ಥಗಳಲ್ಲಿ ಶ್ರೀ ಜನಾರ್ದನನು ಒಂದೊಂದು ರೂಪದಿಂದ ನೆಲೆಸುವನು.

ವಿಶ್ವೇ ದೇವತೆಗಳ ಅಂತರ್ಯಾಮಿಯಾಗಿ 3555 ರೂಪಗಳಿಂದ ಶ್ರಾದ್ಧ ಕರ್ಮಕ್ಕೆ ಯಾವ ವಿಘ್ನಗಳು ಬರದಂತೆ ಶ್ರೀ ಜನಾರ್ದನನು ಶ್ರಾದ್ಧ ಕರ್ಮವನ್ನು ರಕ್ಷಿಸುವನು.

ಶ್ರೀ ಜನಾರ್ದನನ ಹೆಸರೇ ಇದನ್ನು ಹೇಳುತ್ತದೆ…

ಜ = 3

ನಾ = 5

ರ್ದ = 5

ನ = 5

ಶ್ರಾದ್ಧ ಕಾಲದಲ್ಲಿ ಪಠಿಸಬೇಕಾದವುಗಳು…

೧. ಶ್ರೀ ಪದ್ಮ ಪುರಾಣಾಂತರ್ಗತ ಔರ್ಧ್ವ ದೇಹಿಕ ಶ್ರೀ ರಾಮ ಸ್ತೋತ್ರ

೨. ಕಾಠಕೋಪನಿಷತ್

೩. ಶ್ರೀ ವಿಜಯವಿಠ್ಠಲ ವಿರಚಿತ ” ಪೈತೃಕ ಸುಳಾದಿ ”

೪. ಶ್ರೀ ಜಗನ್ನಾಥದಾಸ ಕೃತ ” ಪಿತೃ ಗಣ ಸಂಧಿ ”

ಹೀಗೆ ಶ್ರೀ ಜನಾರ್ದನನ ರೂಪಗಳು.

ನರಕೋದ್ಧಾರ ಇದರಿಂದ ಸತ್ಯ ಪಿತೃಗಳಿಗೆ ।

ನರಕಾತೀತ ನಮ್ಮ ವಿಜಯವಿಠ್ಠಲ ಸುಳಿವಾ ।।

ಪಲ್ಲವಿ ನಾಗರಾಜು ಹಾವೇರಿ

ಶ್ರೀ ಜಗನ್ನಾಥದಾಸರಾಯರ

ಒಮ್ಮೆ ಅಗ್ರಹಾರ ಬ್ರಾಹ್ಮಣರೊಬ್ಬರ ಮನೆಯಲ್ಲಿ ಪ್ರತಿಮಾರ್ಚನೆ ಏರ್ಪಾಡಾಗಿತ್ತು. ಅತ್ಯಂತ ಸಂಭ್ರಮದಿಂದ ಬಂಧು ಭಾಂಧವರೆಲ್ಲರೂ ಸೇರಿದ್ದರು. ಮನೆಯ ಯಜಮಾನನು ಪಂಡಿತೋತ್ತಮರಾದ ಶ್ರೀ ಶ್ರೀನಿವಾಸಾಚಾರ್ಯರನ್ನು ಕರೆಸಿ ಅವರ ಮುಖೇನ ಕುಲ ದೈವ ಪೂಜಾ ವಿಧಾನಗಳನ್ನು ನೆರವೇರಿಸುವಂತೆ ವಿಜ್ಞಾಪಿಸಿಕೊಂಡನು. ಅಂತೆಯೇ ಭಗವದಾರ್ಚನೆಯನ್ನುಆಚಾರ್ಯರು ಪ್ರಾರಂಭಿಸಿದರು.ನೂರಾರು ಜನರು ಸೇರಿದ್ದ ಈ ಸಮಾರಂಭಕ್ಕೆ, ತೀರ್ಥಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.ದುರಾಗ್ರಹಪೀಡಿತನಾದ ಅಡುಗೆಮಾಡಿತ್ತಿದ್ದವನು ಯಾರದೋ ಕುಯುಕ್ತಿಗೆ ಭ್ರಮೆಗೊಂಡು ದೇವರ ನೈವೇದ್ಯಕ್ಕೆ ತಯಾರಾಗಿದ್ದ ಪಾಯಸಭಕ್ಷದಲ್ಲಿ ಉಪ್ಪು ಮಿಶ್ರಣ ಮಾಡಿಬಿಟ್ಟನು.ಸಿದ್ಧವಾದ ಅಡುಗೆಯನ್ನು ದೇವರ ನೈವೇದ್ಯಕ್ಕೆ ತಂದು ಇಡಲಾಯಿತು. ತುಳಸೀದಳ ಹಾಗು ತೀರ್ಥವನ್ನು ಪ್ರೋಕ್ಷಿಸಿ ಅಚಾರ್ಯರು ಜಮಕ್ಕೆ ಕುಳಿತರು. ಧ್ಯಾನಾಸಕ್ತರಾದ ಅಚಾರ್ಯರು ನೈವೇದ್ಯ ಸಮರ್ಪಣೆಯನ್ನು ಹಿಂದುರಿಗಿಸಲೇ ಇಲ್ಲ. ಮನೆಯ ಯಜಮಾನನು ಅಚಾರ್ಯರಲ್ಲಿ ಬಂದು ಭೋಜನಕ್ಕೆ ತಡವಾಗುತ್ತಿದೆ ಎಂದ ಮೇಲೆ ಅಚಾರ್ಯರು ಬಂದವರಿಗೆಲ್ಲಾ ಭೋಜನವನ್ನು ಬಡಿಸುವಂತೆ ತಿಳಿಸಿದರು. ಬಂದಿದ್ದ ಜನರೆಲ್ಲಾ ಪರಮಾನ್ನವನ್ನುಂಡುತೃಪ್ತರಾಗಿ ಯಜಮಾನನನ್ನು ಹರಸಿ ಹೊರಟರು.ಆಶ್ಚರ್ಯಚಕಿತನಾದ ಅಡುಗೆಯವನು ಈ ಪವಾಡವನ್ನು ಕಂಡು ದಿಗ್ಭ್ರಮೆಗೊಂಡ. ತಾನು ಮಾಡಿದ ತಪ್ಪನ್ನು ಅರಿತು ಯಜಮಾನನಲ್ಲಿ ನಡೆದದೆಲ್ಲವನ್ನು ತಿಳಿಸಿದ. ಯಜಮಾನನು ತನ್ನಿಂದಾದಅಪಮಾನಕ್ಕೆ ಕ್ಷಮೆ ಕೇಳಲು ಆಚಾರ್ಯರಲ್ಲಿಗೆ ಬಂದಾಗ ಧ್ಯಾನದಿಂದ ಎದ್ದ ಅಚಾರ್ಯರು ಹೀಗೆ ಹೇಳಿದರು,”ನೈವೇದ್ಯಕ್ಕಿಟ್ಟಪಾಯಸದಲ್ಲಿದ್ದ ಉಪು ಬೆರೆಸಿದ್ದನ್ನು ನಾವು ಭಗವಂತನ ಅನುಗ್ರಹದಿಂದ ಅರಿತು, ಉಪ್ಪಿನಲ್ಲಿರುವ ಜನಾರ್ಧನರೂಪಿ ಭಗವಂತನನ್ನು ಪ್ರಾರ್ಥಿಸಿ, ಸಕ್ಕ್ರೆಯಲ್ಲಿರುವಕೇಶವರೂಪಿ ಭಗವಂತನ ಅನುಗ್ರಹಕ್ಕಾಗಿ ಪ್ರಾರ್ಥಿಸುತಲಿದ್ದೆ. ” ಆಚಾರ್ಯರು ಮಾಡುತ್ತಿದ್ದ ಜಪದ ಫಲವಾಗಿ ಪಾಯಸದಲ್ಲಿದ್ದ ಉಪ್ಪು ಸಕ್ಕರೆಯಾಗಿ ಬದಲಾಗಿತ್ತು.’ಆಶ್ಚರ್ಯತಮಃ’ ಭಗವಂತನಲ್ಲಿ ಇಂತಹ ಅಸಾಧಾರಣ ಚಿಂತನಾ ಕ್ರಮವನ್ನು ಕೈಗೂಡಿಸಿಕೊಂಡವರುಶ್ರೀ ಶ್ರೀನಿವಾಸಾಚಾರ್ಯರು. ಈ ಪರಿಯ ಉಪಾಸನೆಯನ್ನು ಅರಿತವರಿಂದ ಮಾತ್ರವೇ ಸಾಧ್ಯವಾದೀತು ಶ್ರೀ ಹರಿಕಥಾಮೃತಸಾರ ಎಂಬ ಶ್ರೀ ವಾದಿರಾಜರ ಕೋಶಕೊಪ್ಪುವ ಮೇರು ಕೃತಿ.ದಾಸರಾಯರ ಕಾರುಣ್ಯದಿಂದ, ಮಂತ್ರಾಲಯ ಪ್ರಭುಗಳ ಅನುಗ್ರಹದಿಂದ, ಶ್ರೀಮದ್ ಹನುಮ ಭೀಮ ಮಧ್ವವಾದಿರಾಜಾಂತರ್ಗತ ಶ್ರೀಲಕ್ಷ್ಮೀನಾರಸಿಂಹನ ಪರಮಾನುಗ್ರಹಕ್ಕೆ ಪಾತ್ರರಾದ ಶ್ರೀ ಜಗನ್ನಾಥದಾಸರಾಯರ ಆರಾಧನಾ ದಿನದಂದು ಅವರ ಅನುಗ್ರಹವನ್ನು ಬೇಡುತ್ತಾ ಭಗವದನುಗ್ರಹಕ್ಕೆ ಪಾತ್ರರಾಗೋಣ.

ಜಗನ್ನಾಥ ಅಬ್ಬೂರು ತೋಟಂತ್ತಿಲ್ಲಾಯ

ಕ್ಷಮಾ ಸುರೇಂದ್ರರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು

​ 

ಕ್ಷಮಾ ಸುರೇಂದ್ರರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು “ಸ್ತೋತ್ರ ಸಾಹಿತ್ಯಕ್ಕೆ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದ ಕೊಡಿಗೆಯು ಮಹತ್ತರವಾದುದು. 

ಶ್ರೀ ಆಚಾರ್ಯ ಮಧ್ವರು – ಶ್ರೀ ಜಯತೀರ್ಥರು – ಶ್ರೀ ವಿಜಯೀ೦ದ್ರರು -ಶ್ರೀ ಸುಧೀಂದ್ರರು – ಶ್ರೀ ರಾಘವೇಂದ್ರರು – ಶ್ರೀ ಸುಮತೀಂದ್ರರು – ಶ್ರೀ ಮುನೀಂದ್ರರು – ಶ್ರೀ ವಾದೀಂದ್ರರು – ಶ್ರೀ ವಸುಧೇಂದ್ರರು – ಶ್ರೀ ವರದೇಂದ್ರರು – ಶ್ರೀ ಧೀರೆಂದ್ರರು – ಶ್ರೀ ಭುವನೇಂದ್ರರು – ಶ್ರೀ ವ್ಯಾಸತತ್ತ್ವಜ್ಞರು – ಶ್ರೀ ಸುಜನೇಂದ್ರರು – ಶ್ರೀ ಸುಜ್ಞಾನೇಂದ್ರರು – ಶ್ರೀ ಸುಪ್ರಜ್ಞೇಂದ್ರು – ಶ್ರೀ ಸುಕೃತೀಂದ್ರರು – ಶ್ರೀ ಸುಜಯೀ೦ದ್ರರು – ಶ್ರೀ ಅಪ್ಪಣ್ಣಾಚಾರ್ಯರು- ಶ್ರೀ ವಿಜಯರಾಯರು – ಶ್ರೀ ಜಗನ್ನಾಥದಾಸರು ಮೊದಲಾದ ಮಹಾನುಭಾವರು ರಚಿಸಿದ ಅತ್ಯಮೋಘ ಕೃತಿಗಳು ಸ್ತೋತ್ರ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಾಗಿವೆ.ಇಂಥಹಾ ಸ್ತೋತ್ರ ಪರಂಪರೆಯಲ್ಲಿ ಶ್ರೀ ಗುರುರಾಜ ಗುರುಸಾರ್ವಭೌಮರ ಬಗ್ಗೆ ರಚಿಸಿದ ಸ್ತೋತ್ರಗಳು ಸಾಕಷ್ಟಿವೆ. 

ಶ್ರೀ ಹರಿವಾಯು ಗುರುಗಳನ್ನು ಹೊರತು ಪಡಿಸಿ ಶ್ರೀ ಮಂತ್ರಾಲಯ ಪ್ರಭುಗಳ ಬಗ್ಗೆ ನೂರಾರು ಸ್ತೋತ್ರ ರಚನೆಗಳೂ ಮತ್ತು ಸುಮಾರು 12000 ಕ್ಕೂ ಅಧಿಕ ಹರಿದಾಸರ ಪದಗಳ ರಚನೆಯಂತೂ ಅಚ್ಛರಿ ಮೂಡಿಸುವ ಸಂಗತಿ.ಈ ಎಲ್ಲಾ ಶ್ರೀ ರಾಯರ ಮೇಲಿನ ಸ್ತೋತ್ರಗಳಿಗೆ ಮುಕುಟಪ್ರಾಯವಾಗಿರುವುದು ” ಶ್ರೀ ರಾಘವೇಂದ್ರ ಸ್ತೋತ್ರ “!ಶ್ರೀ ರಾಘವೇಂದ್ರ : ಸಕಾಲಪ್ರದಾತಸ್ವಪಾದಕಂಜದ್ವಯ ಭಕ್ತಿಮದ್ಭ್ಯ: ।ಅಘಾದ್ರಿಸಂಭೇದನ ದೃಷ್ಟಿವಜ್ರ:ಕ್ಷಮಾಸುರೇಂದ್ರೋsವತು ಮಾಂ ಸದಾsಯಮ್ ।।ತಮ್ಮ ಪಾದ ಕಮಲಗಳಲ್ಲಿ ಭಕ್ತಿಯುಳ್ಳವರಿಗೆಸಕಲ ಅಭೀಷ್ಟಗಳನ್ನು ಕೊಡುವ; ಪಾಪಗಳೆಂಬ ಪರ್ವತವನ್ನು ಸಂಪೂರ್ಣ ನಾಶಗೊಳಿಸುವಲ್ಲಿ ಸಮರ್ಥವಾದ ದೃಷ್ಟಿಯೆಂಬ ವಜ್ರಾಯುಧವುಳ್ಳ ದೇವತೆಗಳಲ್ಲಿ ಮತ್ತು ಬ್ರಾಹ್ಮಣರಲ್ಲಿ ಶ್ರೇಷ್ಠರಾದ ಶ್ರೀ ರಾಘವೇಂದ್ರತೀರ್ಥರು ನಮ್ಮ ಸದಾ ರಕ್ಷಿಸಲಿ!!ಸಕಲ ಪ್ರದಾತ = ಎಲ್ಲವನ್ನು ಕೊಡುವವರು ಎಂದರ್ಥ.ಕಲಾ = ಲಕ್ಷ್ಮೀ” ಕಲಯಾ ಸಹಿತಃ ಸಕಲ: ” ಎಂದರೆ = ಶ್ರೀ ಮಹಾವಿಷ್ಣು” ಮಹಾಭಾರತ ” ದಲ್ಲಿ…” ನಿಷ್ಕಲಂ ಸಕಲಂ ಬ್ರಹ್ಮ ನಿರ್ಗುಣಂ ಗುಣ ಗೋಚರಮ್ ” – ಎಂದು ಶ್ರೀ ಮಹಾವಿಷ್ಣುವನ್ನು ” ಸಕಲ ” ಎಂದು ಹೇಳುತ್ತದೆ.ಸಕಲಂ = ಪರಬ್ರಹ್ಮದದಾತಿ = ಶಿಷ್ಯೇಭ್ಯಃಉಪದಿಶತಿ = ಭಕ್ತರಿಗೋಸ್ಕರ ಭಗವಂತನನ್ನು ಕುರಿತು ತಮ್ಮ ಗ್ರಂಥಗಳ ಉಪದೇಶಗಳ ಮೂಲಕ” ತದ್ದಾನಂ ಚಾಧ್ಯಪನೇನ ವ್ಯಾಖ್ಯಯ ವಿಲಿಖ್ಯ ಅರ್ಪಣೇನ ಚ ” ಎಂದು ಶ್ರೀ ರಾಯರೇ ಸ್ವತಃ ಖಂಡಾರ್ಥದಲ್ಲಿ ಹೇಳಿರುವಂತೆ..ವಿಷ್ಣು ಸರ್ವೋತ್ತಮತ್ವ ಜ್ಞಾನವನ್ನು ನೀಡಿ ಮೋಕ್ಷವನ್ನು ಪಡೆಯುವ ಅರ್ಹತೆಯನ್ನು ಕೊಡುವವರು ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು.” ಸ್ವಪಾದಕಂಜದ್ವಯ ಭಕ್ತಿಮದ್ಭ್ಯ: ” ಎಂಬಲ್ಲಿ ” ಸ್ವ ” ಶಬ್ದವು ” ಸ್ವತಂತ್ರ “ಎಂಬ ಅರ್ಥವನ್ನು ಹೇಳುತ್ತದೆ.ಶ್ರೀಮದಾಚಾರ್ಯರು ” ತತ್ತ್ವಸಂಖ್ಯಾನ ” ದಲ್ಲಿ ತತ್ತ್ವಗಳನ್ನು ವಿಭಾಗಿಸುವಾಗ….ಸ್ವತಂತ್ರಮಸ್ವತಂತ್ರ೦ ಚ ದ್ವಿವಿಧಂ ತತ್ತ್ವಮಿಷ್ಯತೇ ।ಸ್ವತಂತ್ರೋ ಭಗವಾನ್ವಿಷ್ಣು: ।।ಎಂದು ” ವಿಷ್ಣುವೇ ಸ್ವತಂತ್ರ ತತ್ತ್ವ ” ವೆಂದು ಹೇಳಿದ್ದಾರೆ. ಹಾಗಾದರೆ ಸ್ವತಂತ್ರನಾದ ಶ್ರೀ ಮಹಾವಿಷ್ಣುವಿನ ಪಾದ ಕಮಲಗಳಲ್ಲಿ ಭಕ್ತಿಯುಳ್ಳವರೆಂದು ಅರ್ಥವಾಗುತ್ತದೆ.ಅಂದರೆ, ಶ್ರೀ ಪರಮಾತ್ಮನಲ್ಲಿ ಭಕ್ತಿ ಇರುವವರಿಗೆ ಮಾತ್ರ ಸಕಾಲಪ್ರದಾತರು. ಭಗವದ್ವೇಷಿಗಳನ್ನುಶ್ರೀ ರಾಯರು ಎಂದಿಗೂ ಅನುಗ್ರಹಿಸಲಾರರು.ಅಂಥಹಾ ಶ್ರೀ ಹರಿಯಲ್ಲಿ ಭಕ್ತಿಯುಳ್ಳವರು ಶ್ರೀ ರಾಯರ ಭಕ್ತರೂ ಆಗಿದ್ದಾರೆ!!” ಕ್ಷಮಾಸುರೇಂದ್ರ: ” ಅಂದರೆ…೧. ತಮ್ಮ ಶಮದಮಾದಿ ಗುಣಗಳಿಂದಲೂ; ತತ್ತ್ವ ಜ್ಞಾನದಿಂದಲೂ ಈ ಭೂಮಿಯ ಮೇಲೆ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಪ್ರಕಾಶಿಸುವರು.೨. ಈ ಭೂಮಿಯಲ್ಲಿ ಭಕ್ತರ ಇಷ್ಠಾರ್ಥಗಳನ್ನು ಈಡೇರಿಸುವವರಲ್ಲಿ ಅಗ್ರಗಣ್ಯರು.೩. ಈ ಭೂಮಿಯಲ್ಲಿ ಅಸುರರಾಗಿ ( ಶ್ರೀ ಪ್ರಹ್ಲಾದರಾಜ ) ಅವತರಿಸಿದರೂ ಶ್ರೀ ಹರಿಯ ಪರಮ ಭಕ್ತರು.೪. ಶ್ರೀ ಮುಖ್ಯಪ್ರಾಣದೇವರಲ್ಲಿ ಅವರ ಶಾಸ್ತ್ರ ವ್ಯಾಖ್ಯಾನಗಳಿಂದ ಭಕ್ತಿ ಮಾಡುವ ಭಕ್ತರಲ್ಲಿ ಶ್ರೇಷ್ಠರು ಶ್ರೀ ರಾಯರು!!ಶ್ರೀ ಮಡಕಶಿರ ಭೀಮದಾಸರು…ರಾಘ : ಅಹರಿ ತಾಳ : ಏಕಬೇಡುವೆ ನಿನ್ನ ಕೊಡು ವರವನ್ನ ।। ಪಲ್ಲವಿ ।।ಬೇಡುವ ಭಕ್ತರ ।ಬೀಡೋಳು ನಿನ್ನ । ಕೊಂ ।ಡಾಡುವೆ ರಥದೊಳ ।ಗಾಡುವೆ ವಿಭುವೆ ನಾ ।। ಚರಣ ।।ಇಂದ್ರನ ವಿಭವ । ಸು ।ಧೀಂದ್ರ ತನುಜ । ರಾಘ ।ವೇಂದ್ರ ಗುರುವೇ । ಕಮ ।ಲೇಂದ್ರನ ಕೃಪೆಯ ನಾ ।। ಚರಣ ।।ವರ ಭೀಮೇಶವಿಠಲ ।ನರಿಯದವರೊಳು । ನಾ ।ಪರನೆನುತಲಿ ನಿನ್ನ ।ಚರಣವ ಸ್ತುತಿಸಿ ನಾ ।। ಚರಣ ।।

ಉಡುಪಿಯ ಯಾತ್ರೆ ಮಾಡುವ ಕ್ರಮ

ಉಡುಪಿಯ ಯಾತ್ರೆ ಮಾಡುವ ಕ್ರಮ

download (2)

ಶ್ರೀ ಗುರಭ್ಯೋಃ ನಮಃ ಶ್ರೀ ಪರಮಗುರುಭ್ಯೋಃನಮಃ  ಶ್ರೀಮದಾನಂದತೀರ್ಥ  ಭಗವತಪಾದಾಚಾರ್ಯ ಗುರುಭ್ಯೋ ನಮಃ
ಓಂ ಶ್ರೀ ಕೃಷ್ಣಾಯಃ ನಮಃ

ಮಾಧ್ವರಿಗೆ ಅತೀಶ್ರೇಷ್ಠವಾದ ಕ್ಷೇತ್ರ ಶ್ರೀಮದುಡುಪಿ. ನಮಗೆ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ನ್ನು, ಶ್ರೀಮನ್ ಮಧ್ವಶಾಸ್ತ್ರವನ್ನ ು, ಶ್ರೀಮಧ್ವಾನುಜಾಚಾ ರ್ಯರು, ಶ್ರೀ ಹೃಷೀಕೇಶತೀರ್ಥರು,  ಶ್ರೀ ವಿಜಯಧ್ವಜರು, ಶ್ರೀ ವೇದಾಂಗತೀರ್ಥರು, ಶ್ರೀ ವಾದಿರಾಜರು, ಶ್ರೀ ರಘೂತ್ತಮರು ಮುಂತಾದ ನೂರಾರು ತಪಸ್ವಿವರೇಣ್ಯರನ್ ನು ನೀಡಿದ ಪರಮಪವಿತ್ರ ಭೂಮಿ. ಶ್ರೀಮದಾಚಾರ್ಯರು ನಮಗಾಗಿ ನಮ್ಮ ಉದ್ದಾರಕ್ಕಾಗಿ, ನಮ್ಮ ಸಾಧನೆಯ ಮಾರ್ಗದಲ್ಲಿನ ವಿಘ್ನಗಳನ್ನು ಪರಿಹರಿಸುವದಕ್ಕಾಗ ಿ ಚೆಲುವ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಸರ್ವಶ್ರೇಷ್ಠ ಕ್ಷೇತ್ರ, ಶ್ರೀಮದುಡುಪಿ.

ನಾವು ಯಾವುದೇ ಕ್ಷೇತ್ರಕ್ಕೆ ಯಾತ್ರೆ ಹೊರಡುವ ಸಂಕಲ್ಪ ಮಾಡಿದ ತಕ್ಷಣ ನಮ್ಮ ಮನೆದೇವರಿಗೆ ನಮಸ್ಕರಿಸಬೇಕು. ದೇವರ ಮನೆಗೆ ಹೋಗಿ, ಮನೆದೇವರನ್ನು ಮನಸ್ಸಿನಲ್ಲಿಯೇ ಚಿಂತಿಸಿ ಸಾಷ್ಟಾಂಗ ನಮಸ್ಕಾರ ಮಾಡಿ, ಸ್ವಾಮಿನ್, ಶ್ರೀಮದುಡುಪಿಯ ಯಾತ್ರೆ ಮಾಡುತ್ತಿದ್ದೇನೆ,  ಅದು ನಿರ್ವಿಘ್ನವಾಗಿ, ನಿರಾತಂಕವಾಗಿ ಮುಖ್ಯವಾಗಿ ನನ್ನ ಬಿಂಬರೂಪನಾದ ಶ್ರೀಹರಿ ಪ್ರೀತನಾಗುವಂತೆ ನಡೆಯಲಿ ಎಂದು ಪ್ರಾರ್ಥಿಸಬೇಕು.

ಯಾತ್ರೆ ಎಂದರೆ ನಮ್ಮ ಪಾಪಗಳ ಪರಿಹಾರಕ್ಕಾಗಿ ಮಾಡುವ ಶ್ರೇಷ್ಠಸಾಧನೆ. ಆ ಸಾಧನೆಗೆ ನಮ್ಮ ದೇಹ ಅಣಿಯಾಗಬೇಕು. ಯಾತ್ರೆ ಎಂದರೆ ಒಂದು ಶ್ರೇಷ್ಠವಾದ ದೇವರಪೂಜೆ. ಆ ಪೂಜೆಗೆ ನಮ್ಮ ಶರೀರ ಮನಸ್ಸುಗಳು ಅಣಿಯಾಗಬೇಕು. ಹೇಗೆ ದೇವರ ಪೂಜೆ ಮಾಡುವ ಮುನ್ನ ಶುದ್ಧ ಮಡಿಯಲ್ಲಿ ಸ್ನಾನವನ್ನು ಮಾಡಿ ದೇಹವನ್ನು ಶುದ್ಧಗೊಳಿಸುತ್ತವ ೆಯೋ ಹಾಗೆ, ಯಾತ್ರೆಯೆಂಬ ಶ್ರೇಷ್ಠ ಭಗವತ್ಪೂಜೆಗಾಗಿ ದೇಹ ಮನಸ್ಸು ಮಾತುಗಳನ್ನು ಶುದ್ಧಗೊಳಿಸಲು ಒಂದು ದಿವಸ ಉಪವಾಸವನ್ನು ಮಾಡಬೇಕು.

ಉಪವಾಸ ಮಾಡುವ ದಿವಸ ಬೆಳಿಗ್ಗೆ ಎದ್ದು ದೇವರ ಪೂಜೆಯನ್ನು ಮುಗಿಸಿ ದೇವರ ಮುಂದೆ ನಮಸ್ಕಾರ ಮಾಡಿ

ಸರ್ವಕ್ಷೇತ್ರೇಶ ದೇವೇಶ ತೀರ್ಥಪಾದ ನಮೋsಸ್ತು ತೇ I
ತೀರ್ಥಯಾತ್ರಾಂ ಕರಿಷ್ಯೇsಹಂ ಘೋರಸಂಸಾರಮುಕ್ತಯೇ  I
ತದರ್ಥಂ ದೇಹಶುದ್ಧ್ಯರ್ಥಂ ಉಪೋಷ್ಯೇ ನಾರದಪ್ರಿಯ I
ದೇಹದೋಷಾನ್ ಮನೋದೋಷಾನ್ ವಚೋದೋಷಾಂಶ್ಚ ನಾಶಯ II

“ಸಕಲದೇವತೆಗಳಿಗೂ ಒಡೆಯನಾದ, ಸಮಸ್ತಕ್ಷೇತ್ರಗಳಿ ಗೂ ನಾಥನಾದ, ಸಮಸ್ತತೀರ್ಥಗಳನ್ನ ು ಸೃಜಿಸುವ ಪಾದವುಳ್ಳ, ಸದಾ ತೀರ್ಥಯಾತ್ರಾದಿಗಳ ಲ್ಲಿ ಆಸಕ್ತರಾದ ನಾರದಾದಿ ಮಹರ್ಷಿಗಳಿಗೆ ಪ್ರಿಯನಾದ ಒ ರಮಾಪತೇ, ಘೋರಸಂಸಾರದಿಂದ ಮುಕ್ತನಾಗಬಯಸಿ ತೀರ್ಥಯಾತ್ರೆಯನ್ನ ು ಮಾಡಲು ಉದ್ಯುಕ್ತನಾಗಿದ್ದ ೇನೆ. ತೀರ್ಥಯಾತ್ರೆ ನಿನ್ನ ಪೂಜೆ, ಅದನ್ನು ಮಾಡಲು ಮನೋ-ವಾಕ್-ಕಾಯಗಳ ಶುದ್ಧಿಯಿರಬೇಕು, ಆ ಶುದ್ಧಿಗಳನ್ನು ಸಂಪಾದಿಸಲೋಸುಗ ಈ ದಿವಸ ಉಪವಾಸ ಮಾಡುತ್ತಿದ್ದೇನೆ,  ಸ್ವಾಮಿ. ಈ ಉಪವಾಸದಿಂದ ಪ್ರೀತನಾಗಿ ನನ್ನ ದೇಹದ, ಮನಸ್ಸಿನ ಮತ್ತು ಮಾತಿನ ದೋಷಗಳನ್ನು ವಿನಾಶ ಮಾಡಿ ನನ್ನನ್ನು ಶುದ್ಧನನ್ನಾಗಿಸು”

ಎಂದು ಆಚಮನ-ಪ್ರಾಣಾಯಮಗಳ ನ್ನು ಮಾಡಿ ಸಂಕಲ್ಪ ಮಾಡಬೇಕು. ಆ ನಂತರ ಕನಿಷ್ಠಪಕ್ಷ ಒಬ್ಬ ಬ್ರಾಹ್ಮಣ ದಂಪತಿಗಳಿಗೆ ಆ ದಿವಸ ಭೋಜನವನ್ನು ಮಾಡಿಸಬೇಕು. ಆ ನಂತರ ತಾನು ಮೂರು ಬಾರಿ ತೀರ್ಥ ಮತ್ತು ಗಂಧಾಕ್ಷತೆಗಳನ್ನು  ಹಚ್ಚಿಕೊಳ್ಳಬೇಕು.  ಇಡಿಯ ದಿವಸ ಪೂರ್ಣವಾಗಿ ದೇವರ ಸ್ಮರಣೆ ಮಾಡುತ್ತ, ವಿಶೇಷವಾಗಿ ಶ್ರೀಮದಾಚಾರ್ಯರ ಯಾತ್ರಾಪ್ರಸಂಗದ ಚರಿತ್ರೆಗಳನ್ನು ಶ್ರವಣ ಮಾಡಬೇಕು.

ಮಾರನೆಯ ದಿವಸವೂ ಒಬ್ಬ ದಂಪತಿಗಳನ್ನು ಕರೆಯಿಸಿ, ದೇವರ ಪೂಜೆಯ ನಂತರ ಉಪವಾಸವನ್ನು ದೇವರಿಗೆ ಸಮರ್ಪಿಸಿ, ಬ್ರಾಹ್ಮಣಭೋಜನದ ನಂತರ ಅವರ ಅನುಜ್ಞೆಯನ್ನು ತೆಗೆದುಕೊಂಡು ತಾನು ಊಟ ಮಾಡಬೇಕು.

ಆ ನಂತರ ಸಾಯಂಕಾಲದ ಸಮಯದಲ್ಲಿ ಉಡುಪಿಯ ಮಾಹಾತ್ಮ್ಯ, ಉಡುಪಿಯಲ್ಲಿನ ಶ್ರೀವಾದಿರಾಜಾದಿ ಯತಿಪುಂಗವರು, ಮಧ್ವಸರೋವರ, ಚಂದ್ರಮೌಳೀಶ್ವರ, ಶ್ರೀಮದಾಚಾರ್ಯರು,  ಅನಂತೇಶ್ವರ, ಶ್ರೀಕೃಷ್ಣ ಎಲ್ಲರನ್ನೂ ನೆನೆದು ಶ್ರೀಮದಾಚಾರ್ಯರು ಶ್ರೀಕೃಷ್ಣಪ್ರತಿಷ ್ಠಾಪನೆ ಮಾಡಿದ ಪ್ರಸಂಗವನ್ನು ಶ್ರವಣ ಮಾಡಬೇಕು. ಪಠಣ ಮಾಡಬೇಕು. (ಶ್ರೀ ಮಧ್ವವಿಜಯದ ಒಂಭತ್ತನೆಯ ಸರ್ಗ)

ಆ ನಂತರ ಯಾತ್ರೆಗೆ ಹೊರಡುವ ಮುನ್ನ ಮನೆಯಲ್ಲಿ ದೇವರಿಗೆ ನಮಸ್ಕಾರ ಮಾಡಿ ಯಾತ್ರೆಯಲ್ಲಿ ಯಾವ ರೀತಿಯ ತೊಂದರೆಯೂ ಬಾರದಂತೆ ಅನುಗ್ರಹಿಸು ಎಂದು ಪ್ರಾರ್ಥನೆ ಮಾಡಿಕೊಂಡು ವಾಹನದಲ್ಲಿ ಯಾತ್ರೆ ಮಾಡುತ್ತಿರುವದಕ್ಕ ಾಗಿ ಕ್ಷಮೆಯನ್ನು ಯಾಚಿಸಬೇಕು.

ಪದ್ಭ್ಯಾಂ ಗಂತುಮಶಕ್ತೋsಹಂ ಯಾತ್ರಾರ್ಥಂ ಯಾನಮಾಶ್ರಯೇ I
ಕ್ಷಮಸ್ವ ಪುಂಡರೀಕಾಕ್ಷ ದೀನಮುದ್ಧರ ಮಾಧವ II

“ಓ ರಮೆಯರಸ, ನೀ ಕೊಟ್ಟ ಕಾಲುಗಳಿಂದ ನಡೆಯುತ್ತಲೇ ನಿನ್ನ ಕ್ಷೇತ್ರದ ಯಾತ್ರೆಯ ಮಾಡಬೇಕು. ಆದರೆ, ಅಷ್ಟು ದೂರ ನಡೆಯುವ ದೇಹ-ಮನಸ್ಸುಗಳ ಶಕ್ತಿ ನನಗಿಲ್ಲ. ಓ ಕರುಣಾಳು, ನಿನ್ನ ತಾವರೆಗಣ್ಗಳಿಂದ ನನ್ನನ್ನು ನೋಡಿ ಕೃಪೆ ಮಾಡಿ ನನ್ನನ್ನು ಕ್ಷಮಿಸು. ದೀನ ನಾನು, ಉದ್ದರಿಸು ಸ್ವಾಮಿ”

ಎಂದು ಪ್ರಾರ್ಥಿಸಿ ದೇವರಿಗೆ ಹನ್ನೊಂದು ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಬೇಕು.

ಆ ಬಳಿಕ ದೇವರಿಗೆ ಮಂಗಳಾರತಿ ಮಾಡಿ ಮನೆಯಲ್ಲಿ ಯಾರು ಹಿರಿಯರಿದ್ದಾರೆಯೋ  ಅವರಿಂದ ಮಂತ್ರಾಕ್ಷತೆಗಳನ್ ನು ಸ್ವೀಕರಿಸಿ ತಲೆಯ ಮೇಲೆ ಧರಿಸಿ ಹಿರಿಯರಿಗೆಲ್ಲ ನಮಸ್ಕರಿಸಿ ಯಾತ್ರೆಗೆ ಹೊರಡಬೇಕು. (ಹಿರಿಯರು ಯಾತ್ರೆಗೆ ಬರುತ್ತಿದ್ದರೂ ಅವರಿಗೆ ನಮಸ್ಕಾರ ಮಾಡಿ, ಮಂತ್ರಾಕ್ಷತೆಯನ್ನ ು ಅವರಿಂದ ಸ್ವೀಕರಿಸಿ ಅವರೊಡನೆ ಹೊರಡಬೇಕು)

ಆ ನಂತರ ವಾಹನದಲ್ಲಿ ಕುಳಿತಾಗ

ಪ್ರಯಾಣೇ ಗರುಡಾರೂಢಂ ಪಾರಿಜಾತಹರಂ ಹರಿಮ್ I
ಸತ್ಯಭಾಮಾಯುತಂ ಕೃಷ್ಣಂ ಧ್ಯಾಯೇದಿಷ್ಟಾರ್ಥ ಸಿದ್ಧಯೇ II

ದೇವಲೋಕದಿಂದ ಪಾರಿಜಾತವನ್ನು ತರುತ್ತಿರುವ, ಗರುಡನ ಮೇಲೆ ಸತ್ಯಭಾಮೆಯೊಡನೆ ಕುಳಿತಿರುವ ಶ್ರೀಕೃಷ್ಣನನ್ನು ಪ್ರಾರ್ಥಿಸಿ ದಾರಿಯಲ್ಲಿ ವಿಘ್ನ ಬಾರದಂತೆ ಪ್ರಾರ್ಥಿಸಬೇಕು.

ಶ್ರೀ ಉಡುಪೀಕ್ಷೇತ್ರ ದೂರದಿಂದ ಕಾಣುತ್ತಿದ್ದಂತೆಯ ೇ ವಾಹನದಿಂದ ಕೆಳಗಿಳಿದು ಸಮಸ್ತಕ್ಷೇತ್ರಕ್ಕ ೇ ನಮಸ್ಕಾರವನ್ನು ಸಲ್ಲಿಸಬೇಕು. ವಾಹನದಿಂದ ಇಳಿಯುವದು ಅಸಾಧ್ಯವಾಗಿದ್ದಲ್ ಲಿ ಮನಸ್ಸಿನಿಂದಲೇ ಉಡುಪಿಕ್ಷೇತ್ರದ ಅಭಿಮಾನಿ ದೇವತೆಗೆ ಅಲ್ಲಿನ ಸ್ವಾಮಿಯಾದ ಚಂದ್ರಮೌಳೀಶ್ವರ, ಶ್ರೀಮದಾಚಾರ್ಯರು,  ಅನಂತಾಸನ, ಶ್ರೀಕೃಷ್ಣರಿಗೆ ನಮಸ್ಕಾರಗಳನ್ನು ಸಲ್ಲಿಸಬೇಕು.

ಕ್ಷೇತ್ರವನ್ನು ಪ್ರವೇಶ ಮಾಡಿದ ಬಳಿಕ, ಮಾರ್ಗದ ಅಶುದ್ಧಿಯನ್ನೆಲ್ಲ  ಕಳೆದುಕೊಂಡು, ಶುದ್ಧವಾದ ರೀತಿಯಲ್ಲಿ ಕ್ಷೇತ್ರಪ್ರವೇಶ ಮಾಡಬೇಕು. (ನೀವು ಉಳಿದುಕೊಳ್ಳುವ ಸ್ಥಳದಲ್ಲಿ ಒಮ್ಮೆ ಸ್ನಾನ ಮಾಡಿ ಆ ನಂತರ ಮಧ್ವಸರೋವರಕ್ಕೆ ಸ್ನಾನಕ್ಕಾಗಿ ಹೋಗುವದು ಉತ್ತಮ ಪಕ್ಷ. ಶ್ರೀಪಾದಾರಾಜ ಮಠದ ಪ್ರಾತಃಸ್ಮರಣೀಯರಾ ದ ಶ್ರೀ ಸುಗುಣನಿಧಿಶ್ರೀಪಾ ದಂಗಳವರು ಬಹುಕಾಲ ಕಾವೇರಿಯ ತೀರದಲ್ಲಿ ವಾಸವಾಗಿದ್ದವರು. ಅವರು ಮಠದಲ್ಲಿನ ಬಾವಿಯಲ್ಲಿ ಮೊದಲಿಗೆ ಸ್ನಾನ ಮಾಡಿ ಶುದ್ಧ ಮಡಿಯಲ್ಲಿ ಹೋಗಿ ಕಾವೇರಿಯ ಸ್ನಾನ ಮಾಡುತ್ತಿದ್ದರು. ಎಂದಿಗೂ ಮೈಲಿಗೆಯಲ್ಲಿ ಕಾವೇರಿಯ ಸ್ಪರ್ಶ ಮಾಡದ ಮಹಾನುಭಾವರು ಅವರು. ಅಂತಹ ಸದ್ಗುಣಶಾಲಿಗಳ ಸ್ಮರಣೆ ಮಾಡಿ ಅವರಂತೆ ನಮ್ಮಲ್ಲಿಯೂ ಕಿಂಚಿತ್ತಾದರೂ ಸದ್ಗುಣ ಬರಲಿ ಎಂದು ಶ್ರೀಕೃಷ್ಣನನ್ನು ಪ್ರಾರ್ಥಿಸಿ ನೀವಿರುವ ಸ್ಥಳದಲ್ಲಿಯೇ ಬೆಳಿಗ್ಗೆ ಸ್ನಾನವನ್ನು ಮುಗಿಸಿ ಆ ನಂತರ ಮಧ್ವಸರೋವರಕ್ಕೆ ಸ್ನಾನಕ್ಕಾಗಿ ತೆರಳಬೇಕು.)

ಉಡುಪಿಯ ರಥಬೀದಿ ನಮ್ಮೊಡೆಯ ಶ್ರೀಕೃಷ್ಣನ ಮೆರವಣಿಗೆಯ ಬೀದಿ. ಶ್ರೀಮದಾಚಾರ್ಯರಿಂ ದಾರಂಭಿಸಿ ಸಮಸ್ತ ಭಾಗವತೋತ್ತಮರು ನಡೆದಾಡಿದ ಮಹಾಬೀದಿ. ಅದೆಂತಹ ಪರಿಸ್ಥಿತಿಯಲ್ಲಿಯ ೂ ಆ ರಥಬೀದಿಯಲ್ಲಿ ಚಪ್ಪಲಿ ಹಾಕಿಕೊಂಡು ನಡೆಯಬಾರದು. ಇವತ್ತಿಗೂ ಸಹ ಯಾವುದೇ ಶ್ರೀಗಳೂ ಸಹ ರಥಬೀದಿಯಲ್ಲಿ ವಾಹನದಲ್ಲಿ ಬರುವದಿಲ್ಲ. ಹೀಗಾಗಿ ಸರ್ವಥಾ ವಾಹನವನ್ನೇರಿ ಹೋಗಬಾರದು. (ಉಡುಪಿಯಷ್ಟೇ ಅಲ್ಲ, ಎಲ್ಲಿಯೂ ಸಹ ದೇವಸ್ಥಾನಗಳ ಮುಂದೆಯೇ ಹೋಗಿ ವಾಹನಗಳನ್ನು ನಿಲ್ಲಿಸಬಾರದು. ದೇವಸ್ಥಾನದಿಂದ ದೂರದಲ್ಲಿಯೇ ವಾಹನವನ್ನು ನಿಲ್ಲಿಸಿ, ಕಾಲುಗಳನ್ನು ತೊಳೆದುಕೊಂಡು ಶುದ್ಧವಾದ ವೇಷದಲ್ಲಿ ದೇವಸ್ಥಾನದ ಬಳಿಗೆ ಪ್ರವೇಶ ಮಾಡಬೇಕು)

ಎಂದಿಗೂ ಆ ರಥಬೀದಿಯಲ್ಲಿ ಅಪ್ರದಕ್ಷಿಣೆಯಾಗಿ  ನಡೆದು ಬರಬಾರದು. ಎಷ್ಟೇ ಶ್ರಮವಾದರೂ ಪ್ರದಕ್ಷಿಣಾಕಾರದಲ ್ಲಿಯೇ ನಡೆಯಬೇಕು. ಮೊದಲಿಗೆ ಶ್ರೀಮಧ್ವಸರೋವರಕ್ ಕೆ ಹೋಗಿ ಮಧ್ವಸರೋವರಕ್ಕೆ ನಮಸ್ಕಾರ ಮಾಡಿ, ನಮ್ಮ ಶ್ರೀಮದಾಚಾರ್ಯರ, ಸಮಸ್ತ ಭಾಗವತೋತ್ತಮರ ಸ್ನಾನದಿಂದ ಪರಮಪವಿತ್ರವಾದ ಆ ತೀರ್ಥವನ್ನು ಭಕ್ತಿಯಿಂದ ಪ್ರೋಕ್ಷಣೆ ಮಾಡಿಕೊಳ್ಳಬೇಕು. ನಮ್ಮೊಡನೆ ಹಿರಿಯ ಬ್ರಾಹ್ಮಣರಿದ್ದರೆ  ಅವರಿಗೆ ಪ್ರೋಕ್ಷಣೆ ಮಾಡಲು ಪ್ರಾರ್ಥಿಸಿಕೊಳ್ಳ ಬೇಕು. ನಾವೇ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವದಕ್ಕ ಿಂತಲೂ ಹಿರಿಯರಿಂದ ಗುರುಗಳಿಂದ ಮಾಡಿಸಿಕೊಳ್ಳುವದ ಸೌಭಾಗ್ಯ. ಆ ನಂತರ, ನಮ್ಮ ಶ್ರೀಮದಾಚಾರ್ಯರು ಸ್ನಾನ ಮಾಡುತ್ತಿದ್ದ ಪ್ರದೇಶವಿದು, ಶ್ರೀಮದಾಚಾರ್ಯರ ಸನ್ನಿಧಾನವಿದೆ ಇಲ್ಲಿ ಎಂಬ ಎಚ್ಚರದೊಂದಿಗೆ ಭಕ್ತಿಯಿಂದ ಆ ಪವಿತ್ರ ಮಧ್ವಸರೋವರದಲ್ಲಿ ಸ್ನಾನವನ್ನು ಮಾಡಬೇಕು. ಅಲ್ಲಿಯೇ ಸಂಧ್ಯಾವಂದನೆ ಮತ್ತು ಸಂಕ್ಷಿಪ್ತವಾಗಿ ದೇವರಪೂಜೆಯನ್ನು ಮುಗಿಸಿ ದೇವರ ದರ್ಶನಕ್ಕೆ ತೆರಳಬೇಕು.

ಮೊದಲಿಗೆ ಶ್ರೀ ಚಂದ್ರಮೌಳೀಶ್ವರನ ಸನ್ನಿಧಾನಕ್ಕೆ ಬಂದು ಸಾಷ್ಟಾಂಗವೆರಗಿ, ಸ್ವಾಮಿನ್, ಉಮಾಪತೇ, ನನ್ನೊಡೆಯ ಶ್ರೀಕೃಷ್ಣನನ್ನು ಕಾಣಲು ಬಂದಿದ್ದೇನೆ. ಅವನನ್ನು ಕಾಣುವಾಗ ಮನಸ್ಸಿನಲ್ಲಿ ಭಕ್ತಿ ಮೂಡುವಂತೆ ನನ್ನ ಮನಸ್ಸನ್ನು ನಿಯಮಿಸು ಎಂದು ಪ್ರಾರ್ಥಿಸಬೇಕು. ನಿನ್ನ ದರ್ಶನ ನಿರಂತರ ನೀಡು ಚಂದ್ರೇಶ್ವರ ಎಂದು ಪ್ರಾರ್ಥಿಸಿ ಮನಃಪೂರ್ತಿಯಾಗುವಷ ್ಟು ನಮಸ್ಕಾರಗಳನ್ನು ಮಾಡಿ ಅನಂತೇಶ್ವರ ದೇಗುಲಕ್ಕೆ ಬರಬೇಕು. ಅನಂತಾಸನನಿಗೆ ಸಾಷ್ಟಾಂಗವೆರಗಿ ಕೈಜೋಡಿಸಿ ಸ್ವಾಮಿನ್, ಶ್ರೀಮಧ್ಯಗೇಹಾರ್ಯ ರ ಕುಲದೈವ ನೀನು. ಅವರ ತಪಸ್ಸಿಗೆ ಮೆಚ್ಚಿ ಶ್ರೀಮದಾಚಾರ್ಯರನ್ ನೇ ಮಗನನ್ನಾಗಿ ಕರುಣಿಸಿದಿ. ನನ್ನ ವಂಶದಲ್ಲಿಯೂ ಸದ್ವೈಷ್ಣವರು ಹುಟ್ಟುವಂತೆ, ಶ್ರೀಮದಾಚಾರ್ಯರ ಶಾಸ್ತ್ರವನ್ನು ಅಧ್ಯಯನ ಮಾಡುವ ಸುಜೀವರು ಹುಟ್ಟಿಬರುವಂತೆ ಅನುಗ್ರಹಿಸು ಎಂದು ಪ್ರಾರ್ಥಿಸಬೇಕು.

ಸ್ವಾಮಿನ್, ಕುಂಜಮಾಧವ ಎಂಬ ಬ್ರಾಹ್ಮಣೋತ್ತಮರ ಮೇಲೆ ಕರುಣೆಯಿಟ್ಟು ಬಂದು ಅವರು ನೀಡಿದ ರಜತಪೀಠದಲ್ಲಿ ಕುಳಿತು, ಅವರು ಮಾಡಿದ ಯಜ್ಞವನ್ನು ಸ್ವೀಕರಿಸಿದ ಕರುಣಾಳು ನೀನು. ನನ್ನ ಮನಸ್ಸಿನ ಕೊಳೆಯನ್ನು ಕಳೆದು ಆ ಶುಭ್ರಮನಃಪೀಠದಲ್ಲ ಿ ಆಸೀನನಾಗು. ನನ್ನಿಂದ ಸತ್ಕರ್ಮಗಳನ್ನು ಮಾಡಿಸಿ ಆ ಸತ್ಕರ್ಮಗಳನ್ನು ಸ್ವೀಕಾರ ಮಾಡು ಎಂದು ಆ ಜಗದೊಡೆಯ ಅನಂತಾಸನನನ್ನು ಪ್ರಾರ್ಥಿಸಬೇಕು.

ಆ ನಂತರ ಪ್ರದಕ್ಷಿಣೆ ಬರುವಾಗ, ಶ್ರೀಮದಾಚಾರ್ಯರ ಪರಮಪವಿತ್ರ ಸನ್ನಿಧಾನವಿರುವ, ಶ್ರೀಮದಾಚಾರ್ಯರು ನಿರಂತರ ಶಾಸ್ತ್ರದ ಪಾಠ ಹೇಳುತ್ತಿದ್ದ ಸ್ಥಳಕ್ಕೆ ನಮಸ್ಕಾರಗಳನ್ನು ಮಾಡಬೇಕು.

“ಗುರುದೇವ, ನಾನು ನಿಮ್ಮ ಅಧೀನ. ನಿಮ್ಮ ದಾಸ. ನಿಮ್ಮ ಶಾಸ್ತ್ರದ ಅಧ್ಯಯನ ಮಾಡುವ ಸೌಭಾಗ್ಯವನ್ನು, ಸದಾ ನಿಮ್ಮ ಶಾಸ್ತ್ರದ ರಸಾನುಭವದಲ್ಲಿ ಮಗ್ನನಾಗಿರುವ ಮಹಾಸೌಭಾಗ್ಯವನ್ನು  ಕರುಣಿಸಿ” ಎಂದು ಪ್ರಾರ್ಥಿಸಬೇಕು.

ಆ ನಂತರ ಮನಸ್ಸಿಗೆ ತೃಪ್ತಿಯಾಗುವಷ್ಟು  ಅನಂತಾಸನನಿಗೆ ಪ್ರದಕ್ಷಿಣೆ ನಮಸ್ಕಾರಗಳನ್ನು ಸಲ್ಲಿಸಿ ಯಾವ ಭಗವಂತನ ರೂಪವನ್ನು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ು ನಮಗಾಗಿ ಪ್ರತಿಷ್ಠಾಪನೆ ಮಾಡಿದರೋ, ಯಾವ ಭಗವಂತ ನಮಗಾಗಿ ದೇವಕೀದೇವಿಗೆ ಲೀಲೆಗಳನ್ನು ತೋರಿದನೋ, ಯಾವ ಭಗವಂತ ನಮಗಾಗಿ ರುಗ್ಮೀಣೀದೇವಿಯಿಂ ದ ಪೂಜಿತನಾದನೋ, ಯಾವ ಭಗವಂತ ನಮಗಾಗಿ ನಮ್ಮ ಸಾಧನಮಾರ್ಗದ ವಿಘ್ನಗಳನ್ನು ಕಳೆಯಲಿಕ್ಕಾಗೆ ಜಗತ್ತಿನಲ್ಲಿಯೇ ಸರ್ವೋತ್ತಮವಾದ ಈ ಉಡುಪಿಯಲ್ಲಿ ನೆಲೆನಿಂತಿದ್ದಾನೆ ಯೋ ಆ ಮುದ್ದು ಶ್ರೀಕೃಷ್ಣನ ದರ್ಶನಕ್ಕಾಗಿ ಹೋಗುತ್ತಿದ್ದೇವೆ ಎನ್ನುವ ಸಂಭ್ರಮದೊಂದಿಗೆ ಭಕ್ತಿಯಿಂದ ನಡೆಯುತ್ತ ಕನಕನ ಕಿಂಡಿಯ ಬಳಿಗೆ ಬಂದು ದರ್ಶನ ಕೊಡು ಸ್ವಾಮಿ ಎಂದು ಸಾಷ್ಟಾಂಗವೆರಗಿ ಕಿಂಡಿಯಿಂದ ದರ್ಶನ ಮಾಡಬೇಕು.

ಆ ಬಳಿಕ ಮಹಾದ್ವಾರದ ಬಳಿಗೆ ಬಂದು ವಿಷ್ಣುಸಹಸ್ರನಾಮದ  ಪಾರಾಯಣವನ್ನು ಆರಂಭಿಸಿ ವಿನಮ್ರವಾಗಿ ದೇವರ ಗುಡಿಯ ಒಳಗೆ ಪ್ರವೇಶ ಮಾಡಬೇಕು. ಎರಡೂ ಕೈಗಳನ್ನು ಜೋಡಿಸಿ, ಶ್ರೀಮದಾಚಾರ್ಯರು,  ಶ್ರೀಮಧ್ವಾನುಜಾಚಾ ರ್ಯರು, ಶ್ರೀ ಹೃಷೀಕೇಶತೀರ್ಥಾದಿ  ಆಚಾರ್ಯರ ಧನ್ಯಸಂನ್ಯಾಸಿಶಿಷ ್ಯರು, ಪರಮಮಂಗಳ ಶ್ರೀ ವಾದಿರಾಜರು ಮುಂತಾದ ಭಾಗವತೋತ್ತಮರು ಸಮಗ್ರ ಜೀವದ ಭಕ್ತಿಯಿಂದ ನಡೆದು ಬರುತ್ತಿದ್ದ ಸ್ಥಳವಿದು ಎಂದು ಹೆಜ್ಜೆ ಹೆಜ್ಜೆಗೆ ಗುರುಪರಂಪರೆಯನ್ನು  ಸ್ಮರಿಸುತ್ತ ನಡೆಯಬೇಕು. ಆ ಪರಮಪವಿತ್ರದೇಗುಲದ  ಕಣಕಣದಲ್ಲಿ ಲಕ್ಷ್ಮೀದೇವಿಯ ಸನ್ನಿಧಾನವಿದೆ. ಶ್ರೀಮದಾಚಾರ್ಯರು ಅಲ್ಲಿ ಸಾಕ್ಷಾತ್ತಾಗಿ ಅದರೆ ಮನುಷ್ಯದೃಷ್ಟಿಗೆ ಗೋಚರವಾಗದೇ ಸನ್ನಿಹಿತರಾಗಿದ್ದ ಾರೆ. ಸನಕಾದಿಗಳು ಅಲ್ಲಿ ನಿತ್ಯವಾಸವಿದ್ದು ಶ್ರೀಕೃಷ್ಣನ ಮುಂದೆ ತತ್ವವಿಚಾರ ಮಾಡುತ್ತಿರುತ್ತಾರ ೆ. ನಾರದಾದಿ ಮಹರ್ಷಿಗಳು ಅಲ್ಲಿದ್ದು ನಿತ್ಯ ವಿಷ್ಣುನಾಮಸಂಕೀರ್ ತನೆಯಲ್ಲಿ ತೊಡಗಿರುತ್ತಾರೆ. ಹೀಗೆ ಸಮಗ್ರ ಭಾಗವತೋತ್ತಮರ ಸನ್ನಿಧಾನವಿರುವ ಈ ಭೂಮಿಯ ವೈಕುಂಠದಲ್ಲಿ ನಾವಿದ್ದೇವೆ ಎಂಬ ಸಂಭ್ರಮ ನಮ್ಮ ಮನಸ್ಸಿನಲ್ಲಿ ನೆಲೆಮಾಡಿರಬೇಕು.

ಹೀಗೆ ಭಾಗವತೋತ್ತಮರ ಸ್ಮರಣೆ ಮಾಡುತ್ತ ಗರ್ಭಗುಡಿಗೆ ಪ್ರದಕ್ಷಿಣೆ ಬಂದು ನವಗ್ರಹಕಿಂಡಿಯ ಕಡೆಗೆ ತಿರುಗುವಾಗ ಗರುಡದೇವರಿಗೆ, ಪ್ರಾಣದೇವರಿಗೆ ಮನಸ್ಸಿನಿಂದಲೇ ನಮಸ್ಕರಿಸಿ ಶ್ರೀಕೃಷ್ಣನನ್ನು ಕಾಣಬೇಕಾದರೆ ಭಕ್ತಿ ಮನಸ್ಸಿನಲ್ಲಿ ಮೂಡುವಂತೆ ಅನುಗ್ರಹಿಸಿ ಎಂದು ಪ್ರಾರ್ಥಿಸಬೇಕು.

ಆ ಬಳಿಕ ಆ ನವಗ್ರಹಕಿಂಡಿಯ ಮುಂದೆ ಕೈಜೋಡಿಸಿ ನಿಂತು, ಆ ಪರಮಸುಂದರವಿಗ್ರಹದ  ಶ್ರೀಕೃಷ್ಣನನ್ನು ನಮ್ಮ ಕಣ್ಣಗಳಲ್ಲಿ ತುಂಬಿಕೊಳ್ಳಬೇಕು.  ಯಾವ ರೂಪವನ್ನು ಕಾಣಲಿಕ್ಕೆ ಯಶೋದೆ ದೇವಕಿಯರು ತಪಸ್ಸು ಮಾಡಿ ಅವನ ತಾಯಂದಿರಾದರೋ, ಯಾವ ರೂಪವನ್ನು ಕಂಡು ಜಗದಂಬಿಕೆ ರುಗ್ಮೀಣೀದೇವಿ ಬೆರಗಾಗಿ ನಿಂತಳೋ, ಯಾವನ ಮುಂದೆ ಸಮಗ್ರ ಜೀವಪ್ರಪಂಚದ ನಾಥ ನಮ್ಮ ಶ್ರೀಮದಾಚಾರ್ಯರು “ಪ್ರೀಣಯಾಮೋ ವಾಸುದೇವಮ್” ಎಂದು ಮೈಯುಬ್ಬಿ ಹಾಡಿದರೋ, ಯಾವನನ್ನು ಅರ್ಚಿಸಲು ಶ್ರೀ ವಾದಿರಾಜರು ತಮ್ಮ ಸಮಗ್ರ 120 ವರ್ಷಗಳನ್ನೇ ಮುಡುಪಿಟ್ಟರೋ, ಯಾವನನ್ನು ಅರ್ಚಿಸಿ ಶ್ರೀ ರಘೂತ್ತಮರು (ಪಲಿಮಾರು ಮಠದ ಮಹಾನುಭಾವ ಯತಿಗಳು) ಶ್ರೀ ವೇದಾಂಗತೀರ್ಥರು, ಶ್ರೀ ವಿಜಯಧ್ವಜರು ಮುಂತಾದ ನೂರಾರು ಯತಿಕುಲತಿಲಕರು ತಮ್ಮ ಜೀವದ ಸಾಧನೆಯನ್ನು ಪೂರ್ಣಗೊಳಿಸಿಕೊಂಡ ರೋ. ಯಾವನನ್ನು ನಮಗಾಗಿ, ನಮ್ಮ ಉದ್ದಾರಕ್ಕಾಗಿ, ನಮ್ಮ ಸಾಧನೆಯ ಮಾರ್ಗದ ವಿಘ್ನಗಳನ್ನು ಕಳೆಯಲಿಕ್ಕಾಗಿ ಕಾರುಣ್ಯವೇ ಮೈವೆತ್ತ ನಮ್ಮ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ು ಪ್ರತಿಷ್ಠಾಪಿಸಿದರ ೋ ಅಂತಹ ನಮ್ಮೊಡೆಯನ ಮುಂದೆ ಕೈಜೋಡಿಸಿ ನಿಂತು

“ನಾಥ, ನಾನು ನಿನ್ನ ದಾಸ, ನನ್ನ ಸಾಧನೆಯ ಮಾರ್ಗದ ವಿಘ್ನಗಳನ್ನು ಕಳೆದು ನಿರಂತರ ಶ್ರೀಮದಾಚಾರ್ಯರ ಶಾಸ್ತ್ರದ ಅಧ್ಯಯನದಲ್ಲಿ ಆಸಕ್ತನಾಗಿರುವಂತೆ ಮಾಡು” ಎಂದು ಪ್ರಾರ್ಥಿಸಬೇಕು. ಉಳಿದ ಏನೇ ಪ್ರಾರ್ಥನೆ ಇದ್ದರೂ ಆ ನಂತರ. ಈ ಪ್ರಾರ್ಥನೆಯನ್ನು ಮಾತ್ರ ಆ ಗರ್ಭಗುಡಿಯ ಮುಂದೆ ನಿಂತಾಗಲೇ ಮಾಡಬೇಕು. ಶ್ರೀಮದಾಚಾರ್ಯರು ಅವನನ್ನು ಅರ್ಚಿಸುತ್ತ ಅವನ ಸನ್ನಿಧಾನದಲ್ಲಿದ್ ದಾರೆ ಎಂದು ಚಿಂತಿಸಿ “ಶ್ರಾವಯಾಸ್ಮಾಂಶ್ ಚ ಕಿಂಚಿತ್” ಗುರುದೇವ ನಿಮ್ಮ ಶಾಸ್ತ್ರದ ಅಧ್ಯಯನವನ್ನು ನಮಗೂ ನಮ್ಮ ಯೋಗ್ಯತೆಯಂತೆ ಅನುಗ್ರಹಿಸಿ ಎಂದು ಪ್ರಾರ್ಥಿಸಬೇಕು.

ಆ ಬಳಿಕ, ದೇವರಿಗೆ ಬೆನ್ನು ಹಾಕದೇ ವಿನಯದಿಂದ ಹಿಂದಕ್ಕೆ ಬಂದು ಗರುಡ ಪ್ರಾಣದೇವರಿರುವ ಕಟ್ಟೆಯನ್ನೇರಿ ದೇವರಿಗೆ ಸಾಷ್ಟಾಂಗನಮಸ್ಕಾರ ಗಳನ್ನು ಸಲ್ಲಿಸಬೇಕು.

ನಮ್ಮ ಅಂತರ್ಯಾಮಿಯಾದ, ನಮ್ಮ ಗುರುಗಳ ಅಂತರ್ಯಾಮಿಯಾದ, ಪರಮಗುರುಗಳ ಅಂತರ್ಯಾಮಿಯಾದ, ಸಮಗ್ರ ಗುರುಪರಂಪರೆಯ ಅಂತರ್ಯಾಮಿಯಾದ, ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ  ಅಂತರ್ಯಾಮಿಯಾದ ಲಕ್ಷ್ಮೀಪತಿಯಾದ ಶ್ರೀಹರಿಯೇ ವಿಶ್ವಕರ್ಮನಿರ್ಮಿ ತವಾದ, ರುಗ್ಮೀಣೀದೇವಿಯಿಂ ದ ಅರ್ಚಿತವಾದ, ಶ್ರೀಮದಾಚಾರ್ಯರಿಂ ದ ಪ್ರತಿಷ್ಠಾಪಿತವಾದ , ಅಷ್ಟಮಠಗಳ ಮಹಾತಪಸ್ವಿಗಳಿಂದ ಪೂಜಿತವಾದ ಈ ಪ್ರತಿಮೆಯಲ್ಲಿ ಸನ್ನಿಹಿತನಾಗಿದ್ದ ಾನೆ ಎಂದು ಅಂತರ್ಯಾಮಿರೂಪಗಳ ಅಬೇಧಚಿಂತನೆಯನ್ನು ಮಾಡುತ್ತ ನಾಲ್ಕು ನಮಸ್ಕಾರಗಳನ್ನು ಸಲ್ಲಿಸಬೇಕು.

ಆ ಬಳಿಕ ಪ್ರಾಣದೇವರ ದರ್ಶನ ಮಾಡಿ, ನಮಸ್ಕಾರಗಳನ್ನು ಸಲ್ಲಿಸಿ, ಗರುಡದೇವರ ದರ್ಶನ ಮಾಡಿ ನಮಸ್ಕಾರಗಳನ್ನು ಸಲ್ಲಿಸಿ, ಮತ್ತೆ ದೇವರಿಗೆ ಅಭಿಮುಖವಾಗಿ ಮೈದಣಿಯೆ, ಮನದಣಿಯೆ ನಮಸ್ಕಾರಗಳನ್ನು ಸಲ್ಲಿಸಬೇಕು. ಮನಸ್ಸಿನಲ್ಲಿ ನಿರಂತರ ಸ್ತೋತ್ರದ ಪಾರಾಯಣ, ಕಣ್ಗಳಿಂದ ಆ ಸರ್ವೋತ್ತಮನ ದರ್ಶನ ಮಾಡುತ್ತ ನಮಸ್ಕಾರಗಳನ್ನು ಸಲ್ಲಿಸುತ್ತ ಮನಸ್ಸಿನ ಬಯಕೆಗಳನ್ನು ಪ್ರಾರ್ಥನೆಗಳನ್ನು  ಸಲ್ಲಿಸಬೇಕು. ನಮ್ಮ ದುಃಖದುಮ್ಮಾನಗಳನ್ ನು ನಿವೇದಿಸಿಕೊಂಡು, ದೇವರಿತ್ತ ಮಹಾಸೌಭಾಗ್ಯಗಳನ್ನ ು, ಸುಖವನ್ನು ನೆನಪಿಸಿಕೊಂಡು ನೀನಿತ್ತ ಸೌಭಾಗ್ಯ ಎಂದು ಸಮರ್ಪಿಸಿಕೊಂಡು, ಮಾಡಿದ ಪಾಪಗಳನ್ನು ನೆನೆಸಿಕೊಂಡು ಕ್ಷಮಿಸು ಎಂದು ಬೇಡಿಕೊಂಡು, ಮುಂದೆ ನನ್ನಿಂದ ಪಾಪಕರ್ಮಗಳನ್ನು ಮಾಡಿಸಬೇಡ ಎಂದು ಬಿನ್ನವಿಸಿಕೊಂಡು,  ಮಾಡಿದ ದಾನಧರ್ಮಾದಿ ಸತ್ಕರ್ಮಗಳನ್ನು ನೀನು ಅನುಗ್ರಹಿಸಿ ಮಾಡಿಸಿದ್ದು ಎಂದು ವಿನಯದಿಂದ ಸಮರ್ಪಿಸಿಕೊಂಡು, ನಿರಂತರ ನಿನ್ನ ಸ್ಮರಣೆಯಿತ್ತು ಸಲಹು ಎಂದು ಸಮಗ್ರ ಜೀವದ ಭಕ್ತಿಯಿಂದ ಪ್ರಾರ್ಥಿಸುತ್ತ, ಪುರಂದರದಾಸರು ತಿಳಿಸಿದಂತೆ ‘ಒಡೆಯಗೆ ಒಡಲನು ತೋರುವೆ’ ಎಂದು ನಮ್ಮ ಸರ್ವಸ್ವವನ್ನೂ ನಿವೇದಿಸಿಕೊಂಡು ಸಾಷ್ಟಾಂಗವೆರಗಬೇಕ ು.

ಆ ಬಳಿಕ ಅಲ್ಲಿಯೇ ಕುಳಿತು ಇನ್ನೊಬ್ಬರಿಗೆ ತೊಂದರೆಯಾಗದಂತೆ ತುಂಬ ಸಣ್ಣ ಧ್ವನಿಯಲ್ಲಿ ಶ್ರೀಮದಾಚಾರ್ಯರ ದ್ವಾದಶಸ್ತೋತ್ರಗಳ ನ್ನು, ವಾದಿರಾಜರು ರಚಿಸಿದ ದಿವ್ಯ ಸ್ತೋತ್ರಗಳನ್ನು, ನಮ್ಮ ಮಹನೀಯದಾಸರು ರಚಿಸಿದ ಶ್ರೇಷ್ಠಕೃತಿಗಳನ್ ನು ಹಾಡಬೇಕು.

ಹೀಗೆ ಮನಸ್ಸಿಗೆ ತೃಪ್ತಿಯಾಗುವಷ್ಟು  ಕಾಲ ಆ ಪರಮಪವಿತ್ರ ಸನ್ನಿಧಾನದಲ್ಲಿದ್ ದು, ಮತ್ತೊಮ್ಮೆ ನಮಸ್ಕಾರ ಮಾಡಿ, ಮತ್ತೆಮತ್ತೆ ದರ್ಶನ ನೀಡು ಸ್ವಾಮಿ ಎಂದು ಪ್ರಾರ್ಥಿಸಿ ಭಕ್ತಿಯಿಂದ ಕೆಳಗಿಳಿದು ಬಂದು ಗರ್ಭಗುಡಿಗೆ ಪ್ರದಕ್ಷಿಣೆಯಾಗುವ ಂತೆ ನಡೆದು ಬರಬೇಕು. ಗರ್ಭಗುಡಿಯ ಪ್ರವೇಶದ್ವಾರದಲ್ಲ ಿ ಶ್ರೀಮದಾಚಾರ್ಯರ ಪರಮಸುಂದರವಿಗ್ರಹದ  ಗುಡಿಯಿದೆ. ಬಗ್ಗಿ ದರ್ಶನ ಮಾಡಿ, “ಪ್ರದಿಶ ಸುದೃಶಮ್” ಸುಜ್ಞಾನವನ್ನು ಕರುಣಿಸಿ ಎಂದು ಪ್ರಾರ್ಥನೆ ಮಾಡಿ ಗರ್ಭಗುಡಿಗೆ ಪ್ರದಕ್ಷಿಣೆ ಮಾಡುತ್ತಲೇ ಹೊರಬರಬೇಕು.

ಆ ನಂತರ ಭೋಜನಶಾಲೆಯ ಪ್ರಾಣದೇವರು, ಶ್ರೀ ಸುಬ್ರಹ್ಮಣ್ಯದೇವರ ನ್ನು ದರ್ಶಿಸಿ ನಮಸ್ಕರಿಸಿ ಉಡುಪಿಯ ಭವ್ಯಪರಂಪರೆಯ ಮಹಾನ್ ಯತಿವರೇಣ್ಯರ ವೃಂದಾವನಗಳಿಗೆ ಎರಗಬೇಕು. ಅಶ್ವತ್ಥಕ್ಕೆ ಪ್ರದಕ್ಷಿಣೆ ಬರಬೇಕು. ಗೋವುಗಳಿಗೆ ನಮಸ್ಕಾರಗಳನ್ನು ಸಲ್ಲಿಸಬೇಕು.

ಈ ಮಧ್ಯದಲ್ಲಿ ದೇವರ ಪೂಜಾಕೈಂಕರ್ಯದಲ್ಲ ಿ ತಮ್ಮನ್ನು ತಾವು ತೊಡಗಿಸಿಕೊಂಡು ಪರಮಾತ್ಮನ ಅರ್ಚನೆಯಲ್ಲಿ ತಲ್ಲೀನರಾಗುವ ಯತಿಪುಂಗವರು ಕಂಡಾಗ ಅವರ ದೇವಕಾರ್ಯಕ್ಕೆ ತೊಂದರೆಯಾಗದಂತೆ ದೂರದಿಂದಲೇ ನಮಸ್ಕರಿಸಬೇಕು.

ಹೀಗೆ ಮಧ್ಯಾಹ್ನದವರೆಗೆ ಸಾಧ್ಯವಾದಷ್ಟು ಬಾರಿ ದೇವರ ದರ್ಶನ ಪಡೆದು, ಸ್ತೋತ್ರಗಳನ್ನು ಹೇಳಿ ಆ ಪರಮಪವಿತ್ರ ಸನ್ನಿಧಾನದಲ್ಲಿ ಯತಿಗಳಿಂದ ತೀರ್ಥವನ್ನು ಪಡೆದು ಪ್ರಸಾದವನ್ನು ಸ್ವೀಕರಿಸಬೇಕು. ಅನೇಕ ಜನ್ಮಗಳ ಸೌಭಾಗ್ಯವಿದ್ದಲ್ಲ ಿ ಉಡುಪಿಯಲ್ಲಿ ಊಟ ಮಾಡುವ ಸುಯೋಗ ಒದಗಿಬರುತ್ತದೆ. ಕಾರಣ, ಇವತ್ತಿಗೂ ಅಲ್ಲಿ ಯಾವ ಯತಿಗಳೂ ನೈವೇದ್ಯ ಮಾಡುವದಿಲ್ಲ. ನೈವೇದ್ಯದ ಪಾತ್ರೆಗಳಿಗೆ ತುಳಸೀದಳವನ್ನು ಹಾಕಿ ಶ್ರೀಗಳು ಹೊರಬಂದು ಜಪ ಮಾಡುತ್ತ ನಿಲ್ಲುತ್ತಾರೆ, ಸ್ವಯಂ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ೇ ಅಲ್ಲಿ ನೈವೇದ್ಯವನ್ನು ಮಾಡುವದು.

ಹೀಗಾಗಿ ಒಂದೊಂದು ತುತ್ತನ್ನು ಉಣ್ಣಬೇಕಾದರೂ ನಮ್ಮ ಶ್ರೀಮದಾಚಾರ್ಯರು ಪರಮಾತ್ಮನಿಗೆ ಸಮರ್ಪಿಸಿದ ಪರಮಪವಿತ್ರ ಪದಾರ್ಥವಿದು, ಇದನ್ನು ಉಣ್ಣುವದರಿಂದ ನನ್ನ ಮನಸ್ಸಿನ ಕಲ್ಮಷಗಳು ದೂರಾಗಲಿ, ದೇಹ ಶುದ್ಧವಾಗಲಿ ಎಂದು ಪ್ರಾರ್ಥಿಸುತ್ತ ಉಣ್ಣಬೇಕು.

ಆ ನಂತರ ಪರ್ಯಾಯಪೀಠಾಧೀಶರನ ್ನು ಕಂಡು ಸಾಷ್ಟಾಂಗವೆರಗಿ ಅವರಿಂದ ಮಂತ್ರಾಕ್ಷತೆಗಳನ್ ನು ಸ್ವೀಕರಿಸಬೇಕು. ಬಳಿಕ ಉಡುಪಿಯಲ್ಲಿನ ಅಷ್ಟಮಠಗಳನ್ನು ಸಂದರ್ಶಿಸಿ, ಅಲ್ಲಿನ ಪೀಠಾಧಿಪತಿಗಳಿಗೆ ನಮಸ್ಕರಿಸಿ, ಆಚಾರ್ಯ ಕರಾರ್ಚಿತ ಪ್ರತಿಮೆಗಳಿಗೆ ನಮಸ್ಕರಿಸಿ, ಉಡುಪಿಯ ಸುತ್ತಮುತ್ತಲಿನ ಕ್ಷೇತ್ರಗಳನ್ನು ದರ್ಶನ ಮಾಡಬೇಕು. ಯಾವ ಕ್ಷೇತ್ರದ ದರ್ಶನವಾಗಲಿ ಬಿಡಲಿ, ಉಡುಪಿಗೆ ಹೋದ ಬಳಿಕ ಪಾಜಕಕ್ಕೆ ಹೋಗದೇ ಬರಬಾರದು. “ಸತ್ಯಲೋಕೇಶ್ವರಃ ಪ್ರಾಣೋ ಯತ್ರಾವಾತರದುತ್ಸು ಕಃ” ಹದಿನಾಲ್ಕು ಲೋಕಗಳ ಒಡೆಯ ಮುಖ್ಯಪ್ರಾಣ ನಮ್ಮ ಉದ್ದಾರಕ್ಕಾಗಿ ಅವತರಿಸಿ ಬಂದಾಗ ಜನ್ಮಭೂಮಿಯನ್ನಾಗಿ  ಆರಿಸಿಕೊಂಡದ್ದು ಆ ಪರಮಪವಿತ್ರ ಪಾಜಕವನ್ನು. ಹೀಗಾಗಿ ಕುಂಜಾರುಗಿರಿಯಲ್ಲ ಿ ದುರ್ಗಾದೇವಿಯ ದರ್ಶನ ಮಾಡಿ, ಪಾಜಕದಲ್ಲಿ ಶ್ರೀಮದಾಚಾರ್ಯರ ದರ್ಶನವನ್ನು ತಪ್ಪದೇ ಮಾಡಿಬರಬೇಕು.

ಸಮಯವಿದ್ದಲ್ಲಿ, ಮತ್ತು ಪರ್ವಕಾಲವಿದ್ದಲ್ಲ ಿ ಅವಶ್ಯವಾಗಿ ಸಮುದ್ರಸ್ನಾನವನ್ನ ು ಮಾಡಿ ವಡಭಾಂಡೇಶ್ವರದಲ್ಲ ಿ ಶ್ರೀ ಬಲರಾಮದೇವರ ದರ್ಶನ ಮಾಡಬೇಕು. ಉಳಿದ ಕ್ಷೇತ್ರಗಳನ್ನೂ ಸಂದರ್ಶಿಸಬೇಕು.

ಹೀಗೆ ಸಾಧ್ಯವಾದಷ್ಟು ಬಾರಿ ದರ್ಶನವನ್ನು ಮಾಡಿ ಹೊರಡಬೇಕಾದರೆ ದೇವರಿಗೆ ನಮಸ್ಕಾರ ಮಾಡಿ ಮತ್ತೆಮತ್ತೆ ದರ್ಶನ ಕರುಣಿಸು ಎಂದು ಪ್ರಾರ್ಥಿಸಿ, ಸಾಧನೆಯ ಮಾರ್ಗದ ವಿಘ್ನಗಳನ್ನು ಪರಿಹರಿಸು ಎಂದು ಬಿನ್ನವಿಸಿ ಗುರುಗಳ ಆಜ್ಞೆಯನ್ನು ಪಡೆದು ಹೊರಡಬೇಕು.

ಮನೆಗೆ ಬಂದ ಬಳಿಕ ಮನೆಯ ಹೊರಗಡೆಯೇ ಕಾಲ್ಗಳನ್ನು ತೊಳೆದುಕೊಂಡು ಮನೆಯ ಒಳಗೆ ಬಂದ ತಕ್ಷಣ ದೇವರ ಮನೆಯ ಮುಂದೆ ನಾವು ತೆಗೆದುಕೊಂಡು ಹೋಗಿದ್ದ ದೇವರ ಪೆಟ್ಟಿಗೆಯನ್ನಿಟ್ ಟು ಮನೆದೇವರ ಸ್ಮರಣೆ ಮಾಡಿ, ಸ್ವಾಮಿನ್ ನಿನ್ನ ಅನುಗ್ರಹದಿಂದ ಶ್ರೀಮದುಡುಪಿಯ ಯಾತ್ರೆ ಸಂಪನ್ನವಾಯಿತು ಎಂದು ಸಾಷ್ಟಾಂಗ ನಮಸ್ಕಾರ ಮಾಡಬೇಕು.

ಮಾರನೆಯ ದಿವಸ ಬ್ರಾಹ್ಮಣದಂಪತಿಗಳ ಿಗೆ ಭೋಜನವನ್ನು ಸಮರ್ಪಿಸಿ ಗುರುಗಳನ್ನು, ಪರಮಗುರುಗಳನ್ನು ಶ್ರೀಮದಾಚಾರ್ಯರನ್ ನು ಸ್ಮರಸಿ ಸಮಗ್ರ ಯಾತ್ರೆಯನ್ನು ವಿಷ್ಣುಪೂಜಾರೂಪವಾ ಗಿ ಚಿಂತಿಸಿ ಅದರಿಂದ ಬಂದ ಸಮಗ್ರ ಪುಣ್ಯವನ್ನೂ ಅವರ ಪಾದಕ್ಕೊಪ್ಪಿಸಿಕೊ ಳ್ಳಬೇಕು. ಇದರಿಂದ ಪ್ರೀತರಾಗುವ ಗುರುಗಳು ಜ್ಞಾನ ಭಕ್ತಿ ವೈರಾಗ್ಯಗಳನ್ನು ಕರುಣಿಸುತ್ತಾರೆ.

ಉಡುಪಿ ನಮಗೆ ಹತ್ತಿರದ ಸರ್ವೋತ್ತಮಕ್ಷೇತ್ ರ. ಒಂದು ರಾತ್ರಿಯ ಹಾದಿಯಲ್ಲಿ ತಲುಪಬಹುದಾದ ಕ್ಷೇತ್ರ. ಹೀಗಾಗಿ ಎಷ್ಟೋ ಬಾರಿ ಅಸಡ್ಡೆ ಮನೆಮಾಡಿರುತ್ತದೆ.  ಸರ್ವಥಾ ತಪ್ಪು. ಉಡುಪಿ ನಮಗಾಗಿ ನಿರ್ಮಾಣವಾದ ಕ್ಷೇತ್ರ. ಶ್ರೀಮದಾಚಾರ್ಯರು ಸರ್ವಮೂಲಗಳು ನಮಗೆ ದೊರೆತ ಕ್ಷೇತ್ರ. ಈ ಕ್ಷೇತ್ರದ ಯಾತ್ರೆ ನಮ್ಮನ್ನು ಅಧ್ಯಯನಶೀಲರನ್ನಾಗ ಿ ಮಾಡುತ್ತದೆ, ನಮಗೆ ಜ್ಞಾನಭಕ್ತಿಗಳನ್ನ ು ಕರುಣಿಸುತ್ತದೆ. ಹೀಗಾಗಿ ವಿಧ್ಯುಕ್ತವಾದ ಕ್ರಮದಲ್ಲಿಯೇ ಈ ಯಾತ್ರೆಯನ್ನು ಮಾಡಿ ಗುರ್ವಂತರ್ಯಾಮಿಗೆ  ಒಪ್ಪಿಸಿಕೊಳ್ಳಬೇಕ ು.

 

ಶ್ರೀ ಮಧ್ವೇಶಾರ್ಪಣಮಸ್ತು

ಶ್ರೀ ಕೃಷ್ಣಾರ್ಪಣಮಸ್ತು

ವಿಶ್ವನಂದಿನಿ ಲೇಖನಮಾಲೆ 6 -ಶ್ರೀಕನಕದಾಸರ ಹರಿಭಕ್ತಿಸಾರ

ವಿಶ್ವನಂದಿನಿ ಲೇಖನಮಾಲೆ 6 -ಶ್ರೀಕನಕದಾಸರ ಹರಿಭಕ್ತಿಸಾರ 

ನೀಲವರ್ಣ ವಿಶಾಲ ಶುಭಗುಣ-
ಶೀಲ ಮುನಿಕುಲಪಾಲ ಲಕ್ಷ್ಮೀ-
ಲೋಲ ರಿಪುಶಿಶುಪಾಲಮಸ್ತಕಶೂಲ ವನಮಾಲ |
ಮೂಲಕಾರಣ ವಿಮಲ ಯಾದವ-
ಜಾಲಹಿತ ಗೋಪಾಲ ಅಗಣಿತ-
ಲೀಲ ಕೋಮಲಕಾಯ ರಕ್ಷಿಸು ನಮ್ಮನನವರತ ॥ ೧೪ ॥

ನೀಲವರ್ಣ : ಕಡುಗಪ್ಪುಬಣ್ಣದವನು.

ವಿಶಾಲ : ವಿಸ್ತೃತನಾದವನು. ಎಣಿಸಲಿಕ್ಕಾಗದ ಅನಂತಗುಣಗಳನ್ನು ಹೊಂದದ್ದಕ್ಕಾಗಿ ಗುಣಗಳಿಂದಲೂ ವಿಶಾಲನಾದವನು. ಅವ್ಯಾಕೃತಾಕಾಶವನ್ನೂ ವ್ಯಾಪಿಸಿ ನಿಂತಿರುವದರಿಂದ ಆಕೃತಿಯಿಂದಲೂ ವಿಶಾಲನಾದವನು. ಕಾಲದ ಎಲ್ಲೆಯನ್ನು ಮೀರಿರುವದರಿಂದ ವಯಸ್ಸಿನಿಂದಲೂ ವಿಶಾಲನಾದವನು.

ಶುಭಗುಣಶೀಲ : ಸತ್ವ ರಜಸ್ಸು ತಮಸ್ಸು ಎಂಬ ಪ್ರಾಕೃತವಾದ ಆ ಕಾರಣಕ್ಕಾಗಿಯೇ ಅಶುಭವಾದ ಗುಣಗಳಿಂದ ರಹಿತನಾಗಿ ಪರಮಶುಭವಾದ ಜ್ಞಾನ ಆನಂದಾದಿ ಅನಂತಗುಣಗಳನ್ನು ಹೊಂದಿರುವವನು.

ಮುನಿಕುಲಪಾಲ : ಸರ್ವಸಂಗಪರಿತ್ಯಾಗವನ್ನೂ ಮಾಡಿ ವೈಷ್ಣವೋತ್ತಮರ ಸಹವಾಸದಲ್ಲದ್ದು ತಪಸ್ಸನ್ನು ಮಾಡುವ ಋಷಿಕುಲವನ್ನು ರಕ್ಷಿಸುವವನು. ರಾಮಾವತಾರದಲ್ಲಿ ಖರ ದೂಷಣ ಮಾರೀಚ ರಾವಣರನ್ನು ಕೊಂದು ದಂಡಕಾರಣ್ಯದ ಋಷಿಗಳನ್ನು ಪಾಲಿಸಿದವನು. ಕೃಷ್ಣಾವತಾರದಲ್ಲಿ ನರಕಾಸುರರನನ್ನು ಕೊಂದು ಋಷಿಸಂಕುಲವನ್ನು ಪೊರೆದವನು.

ಲಕ್ಷ್ಮೀಲೋಲ : ಲೋಲ ಎಂದರೆ ಆಸೆಯುಳ್ಳವನು ‘‘ಲೋಲಶ್ಚಲೇ ಚ ಸತೃಷ್ಣೇ ಚ’’ ಸ್ವರಮಣನಾದರೂ, ನಿತ್ಯತೃಪ್ತನಾದರೂ ಭಗವಂತ ಲಕ್ಷ್ಮೀದೇವಿಯ ಭಕ್ತಿಗೆ ಮೆಚ್ಚಿ ಅವಳಲ್ಲಿ ಅನುರಕ್ತನಾದವನು. ಅವಳ ಕುಡಿಗಣ್ಣ ನೋಟಕ್ಕೆ ಕಾದು ನಿಂತವನಂತೆ ನಿಂತು ಅವಳನ್ನು ಸಂತೋಷಪಡಿಸುವವನು.

ರಿಪುಶಿಶುಪಾಲಮಸ್ತಕಶೂಲ : ಹಿರಣ್ಯಕಶಿಪುವಿನ ಆವೇಶವನ್ನು ಹೊತ್ತು ಶಿಶುಪಾಲ ಎಂಬ ಹೆಸರಿನಿಂದ ಹುಟ್ಟಿದ್ದ ಜಯ ರಾಜಸೂಯದ ಅಗ್ರಪೂಜೆಯ ಸಂದರ್ಭದಲ್ಲಿ ಪೂರ್ಣವಾದ ಅಸುರಾವೇಶದಿಂದ ದ್ವೇಷ ಮಾಡುತ್ತಾನೆ. ಸಭಾಮಧ್ಯದಲ್ಲಿಯೇ ಕೃಷ್ಣನನ್ನು ಯುದ್ಧಕ್ಕಾಗಿ ಅಹ್ವಾನಿಸಿದಾಗ ಪರಮಾತ್ಮ ತನ್ನ ಚಕ್ರವನ್ನು ಪ್ರಯೋಗ ಮಾಡಿ ಅವನನ್ನು ಕೊಲ್ಲುತ್ತಾನೆ. ಹೀಗೆ ಅವನ ಮಸ್ತಕವನ್ನು ಉರುಳಿಸಿ ಅವನ ಪ್ರಾಣಕ್ಕೆ ತಾನೇ ಶೂಲಪ್ರಾಯನಾಗುತ್ತಾನೆ.

ವನಮಾಲ : ಮಹಾಲಕ್ಷ್ಮೀದೇವಿ ವಿವಿಧ ವಿವಿಧ ಪರಿಮಳಭರಿತ ಹೂಗಳ ರೂಪವನ್ನು ಕೊಂಡು ಪರಮಾತ್ಮನಿಗೆ ಹಾರವಾಗಿ ಸೇವೆ ಸಲ್ಲಿಸಲು ಮುಂದಾಗುತ್ತಾಳೆ. ಪರಮಾತ್ಮನ ಆ ರಮಾತ್ಮಕವಾದ ಹಾರವನ್ನು ಧರಿಸಿ ವನಮಾಲ ಎಂದು ಕರೆಸಿಕೊಳ್ಳುತ್ತಾನೆ.

ಮೂಲಕಾರಣ : ವಿಶ್ವದ ಸೃಷ್ಟಿಗೆ ಮೂಲ ಕಾರಣನಾದವನು. ಪರಮಾತ್ಮನಿಂದಲೇ ಸಮಗ್ರ ಜಗತ್ತು ಸೃಷ್ಟಿಯಾಯಿತು ಆದ್ದರಿಂದ ಅವನು ಮೂಲಕಾರಣ.

ವಿಮಲ : ಹಾಗಂತ ಪರಮಾತ್ಮ ಈ ಜಗತ್ತಿಗೆ ಉಪಾದಾನಕಾರಣನಲ್ಲ, ಅರ್ಥಾತ್ ಮಡಿಕೆಗೆ ಮಣ್ಣು ಕಾರಣವಾದಂತೆ, ಮಣ್ಣೇ ಮಡಿಕೆಯಾಗಿ ಪರಿವರ್ತನೆಯಾಗುವಂತೆ ಪರಮಾತ್ಮನೇ ಜಗತ್ತಾಗಿ ಪರಿವರ್ತನೆಗೊಳ್ಳುವದಿಲ್ಲ. ಏಕೆಂದರೆ ಅವನು ವಿಮಲ. ಅವನಲ್ಲಿ ಯಾವ ರೀತಿಯ ದೋಷವೂ ಇಲ್ಲ. ನಿರ್ದೋಷನಾದ ಭಗವಂತ ಸಾವಿರಾರು ದೋಷಗಳಿಂದ ದುಷ್ಟವಾದ ಜಗತ್ತಾಗಿ ಹೇಗೆ ಪರಿಣಾಮಗೊಳ್ಳಲು ಸಾಧ್ಯವೇ ? ಸಾಧ್ಯವಿಲ್ಲ. ಹೀಗಾಗಿ ಅವನು ಮೂಲಕಾರಣನಾದರೂ, ವಿಮಲನಾಗಿ ಮೂಲಕಾರಣ. ಕುಂಬಾರ ಮಣ್ಣಿನಿಂದ ಮಡಿಕೆಯನ್ನು ತಯಾರಿಸುವಂತೆ ಪ್ರಕೃತಿಯಿಂದ ಜಗತ್ತನನ್ನು ಸೃಷ್ಟಿಮಾಡುವ ಮಹಾಕುಂಬಾರ ಭಗವಂತ, ಹೊರತು ಅವನು ಉಪಾದಾನಕಾರಣನಲ್ಲ. ‘‘ಕರೋತಿ ಪಿತೃವದ್ ವಿಶ್ವಂ ಪೂರ್ಣಾಶೇಷಗುಣಾತ್ಮಕಃ’’

ಯಾದವಜಾಲಹಿತ : ಜಾಲ ಎಂದರೆ ಗುಂಪು. ಯಾದವರೆಂಬ ಭಾಗವತೋತ್ತಮರ ಗುಂಪಿಗೆ ಸದಾ ಹಿತನಾದವನು. ಅವರ ಹಿತವನ್ನು ಎಂದೆದಿಗೂ ಕಾಯ್ದವನು. ತನಗೆ ಕಿರುಕುಳ ನೀಡಲು ಸಾಧ್ಯವಾಗದ್ದಕ್ಕೆ ಯಾದವರಿಗೆ ಜರಾಸಂಧ ಕಿರುಕುಳ ನೀಡಲು ಮುಂದಾದಾಗ ಮಥುರೆಯಿಂದ ದ್ವಾರಕೆಗೆ ಅವರನ್ನು ಕರೆದುಕೊಂಡು ಬಂದು ಬಂಗಾರದ ಮನೆಗಳನ್ನು ಅವರಿಗೆ ಕಟ್ಟಿಸಿಕೊಟ್ಟು ಅತುಲ ಐಶ್ವರ್ಯವನ್ನು ಅವರಿಗೆ ನೀಡಿ ಅವರ ಹಿತವನ್ನು ಕಾಯ್ದವನು.

ಗೋಪಾಲ : ಅನಂತೈಶ್ವರ್ಯಸಂಪನ್ನನಾದರೂ ಗೋವಳರ ಮಧ್ಯದಲ್ಲಿ ಅವತರಿಸಿ ಗೋವುಗಳನ್ನು ಕಾದವನು, ದನಗಾಹಿಯಾಗಿ ಗೋವುಗಳನ್ನು ಮೇಯಿಸಿದವನು.

ಅಗಣಿತಲೀಲ : ಹೀಗೆ ಗೋಪಾಲನಾಗಿ, ಗೋವಿಂದನಾಗಿ, ಗೋಪೀಜನವಲ್ಲಭನಾಗಿ, ಕಂಸಾದಿಮಹಾದಾನವಪ್ರಾಣಹರಣನಾಗಿ, ಪಾಂಡವಪ್ರಿಯನಾಗಿ, ಮುನಿಕಲರಕ್ಷಕನಾಗಿ, ಗೀತಾಚಾರ್ಯನಾಗಿ, ಕುರುಕುಲಕೆ ಲಯವಿತ್ತ ಮಹಾಸಾಮರ್ಥ್ಯದವನಾಗಿ, ರುಕ್ಮಿಣ್ಯಾದಿ ಷಣ್ಮಹಿಷಿಯರ ವಲ್ಲಭನಾಗಿ, ಹದಿನಾರುಸಾವಿರಸ್ತ್ರೀಯರ ಮನದರಸನಾಗಿ, ಬಲರಾಮ ಪ್ರದ್ಯುಮ್ನ ಉದ್ಧವ ಸಾತ್ಯಕಿ ಮುಂತಾದ ಭಾಗವತರ ಅರಸನಾಗಿ, ಹರಿದಾಸರ ಪ್ರಭುವಾಗಿ ಎಣಿಸಲಾಗದ ಅನಂತ ಲೀಲೆಗಳನ್ನು ತೋರಿದ ಅಗಣಿತಲೀಲ! ಪರಮಸುಂದರವಿಗ್ರಹನಾದ ಕೋಮಲಕಾಯ ! ನಮ್ಮನ್ನು ಅನವರತ ರಕ್ಷಿಸು ॥ ೧೪ ॥

ವಿಶ್ವನಂದಿನಿಯ 1 – ಜೀವನಸುರಭಿ

ಜೀವನಸುರಭಿ

ವಿಷ್ಣುಭಕ್ತನಾದ ವ್ಯಕ್ತಿ ಬದುಕನ್ನು ರೂಪಿಸಿಕೊಳ್ಳಬೇಕಾದ ಬಗೆಯನ್ನು ತಿಳಿಸುವ ವಿಶ್ವನಂದಿನಿಯ ಭಾಗ)

“ಸುಡುಸುಡುಗಾಳಿಗೊಡ್ಡಿದ ಸೊಡರು ಈ ಸಂಸಾರದೇಳಿಗೆಯು”

ಅದೊಂದು ಪದ್ಯವಿದೆ. ಶ್ರೀ ಕನಕದಾಸರ ಹರಿಭಕ್ತಿಸಾರದಲ್ಲಿನ ಪದ್ಯ. ಇವತ್ತಿನವರೆಗೆ ಆ ಪದ್ಯವನ್ನು ಹೇಳವಾಗ ಕಣ್ಣಲ್ಲಿ ನೀರು ಬಾರದೇ ಇಲ್ಲ. ಕಣ್ಣೀರು ಹಾಕದೇ ನನಗೆ ಅದನ್ನು ಹೇಳಲು ಸಾಧ್ಯವೇ ಇಲ್ಲ. ಮನುಷ್ಯ ತನ್ನ ಜೀವನದಲ್ಲಿ ಅನುಭವಿಸುವ ದುಃಖದ ತೀವ್ರತೆಯನ್ನು  ಪ್ರಾಯಃ ಆ ಪದ್ಯ ಚಿತ್ರಿಸುವಷ್ಟು ಪರಿಸ್ಪಷ್ಟವಾಗಿ ನನಗೆ ಗೊತ್ತಿರುವ ಯಾವ ಪದ್ಯದಲ್ಲಿಯೂ ಚಿತ್ರಿಸಲಾಗಿಲ್ಲ

ಕೇಳುವದು ಕಡುಕಷ್ಟ ಕಷ್ಟದ

ಬಾಳುವೆಯ ಬದುಕೇನು ಸುಡುಸುಡು

ಗಾಳಿಗೊಡ್ಡಿದ ಸೊಡರು ಈ ಸಂಸಾರದೇಳಿಗೆಯು ।

ಬಾಳಬೇಕೆಂಬುವಗೆ ನೆರೆ ನಿ-

ಮ್ಮೂಳಿಗವ ಮಿಗೆ ಮಾಡಿ ಭಕ್ತಿಯೊ-

ಳಾಳಿ ಬದುಕುವದುಚಿತ ರಕ್ಷಿಸು ನಮ್ಮನನವರತ ।।

ನಮ್ಮ ಜೀವನದ ಸಂಕಷ್ಟಗಳನ್ನು, ಅದರಿಂದಾಗುವ ಯಾತನೆಗಳನ್ನು, ಮನಸ್ಸಿನಲ್ಲುಂಟಾಗುವ ದುಃಖಗಳನ್ನು ಶಬ್ದಗಳಲ್ಲಿ ಬರೆದಿಡಲು ಸಾಧ್ಯವಿಲ್ಲ. ಸಾಧ್ಯವೇ ಇಲ್ಲ. ಮನುಷ್ಯ ಆರಡಿ ಎತ್ತರದ ಆಳಾಗಿರಬಹುದು, ಹಿಮಾಲಯದಷ್ಟು ಧೈರ್ಯ ಅವನಲ್ಲಿ ಮನೆ ಮಾಡಿರಬಹುದು, ಆತ ಕೋಟೆ ಕೊತ್ತಲೆಗಳನ್ನು ಕಟ್ಟಿದ ಸಾಹಸಿಯಾಗಿರಬಹುದು, ಇಡಿಯ ಪ್ರಪಂಚವನ್ನು ಎದುರು ಹಾಕಿ ನಿಂತು ತನ್ನ ಆದರ್ಶ ಸಿದ್ಧಾಂತಗಳಿಗಾಗಿ ಹೋರುವ ಮನುಷ್ಯನಾಗಿರಬಹುದು ಒಟ್ಟಾರೆ ಅದೆಷ್ಟೇ ಮಾನಸಿಕ ಎತ್ತರದ ಸ್ಥಿರತೆಯ ಮನುಷ್ಯನಾಗಿರಬಹುದು, ಅಂತಹವನೂ ಸಹ ಯಾವುದೊ ಒಂದು ದುಃಖಕ್ಕೆ ಮೈಮುದುಡಿ ಕುಳಿತು ಅಳುತ್ತಾನೆ. ಕಣ್ಣೀರಾಗಿಬಿಡುತ್ತಾನೆ. ಅಸಹಾಯನಾಗಿ ನಿಲ್ಲುತ್ತಾನೆ. ಅಂತಹ ದುಃಖವನ್ನು ಪ್ರತಿಯೊಬ್ಬ ವ್ಯಕ್ತಿಯೂ ಪಡೆದುಕೊಂಡೇ ಬಂದಿರುತ್ತಾನೆ.

ನಾವು ಮಾಡಿದ ಪಾಪಕರ್ಮಗಳಿಗೆ ಅನುಸಾರವಾಗಿ ನಾವು ಅನುಭವಿಸುವ ಕಷ್ಟಗಳು ಅದೆಷ್ಟು ತೀವ್ರವಾಗಿರುತ್ತದೆ ಎನ್ನುವದನ್ನು ಕನಕದಾಸರು ಒಂದೇ ಮಾತಿನಲ್ಲಿ ಹೇಳುತ್ತಾರೆ, “ಕೇಳುವದು ಕಡುಕಷ್ಟ” ನಮ್ಮ ಯಾತನೆಗಳನ್ನು ಮತ್ತೊಬ್ಬರಿಗೆ ಕೇಳಲು ಸಹಿತ ಸಾಧ್ಯವಾಗುವದಿಲ್ಲ. ಕಿವಿ ಮುಚ್ಚಿಕೊಳ್ಳುತ್ತಾರೆ. ಹೀಗಿರಲು ಸಾಧ್ಯವಾ ಎನ್ನುತ್ತಾರೆ. ಅಂತಹ ಕಷ್ಟವನ್ನು ನಾವು ಅನುಭವಿಸುತ್ತಿರುತ್ತೇವೆ. ಕೇಳುವದು ಕಡುಕಷ್ಟ.

ಸಾವಿರಕನಸನ್ನು ಇಟ್ಟುಕೊಂಡು ಮದುವೆಯಾಗಿ ಬಂದ ಹುಡುಗಿ ಎರಡೇ ತಿಂಗಳಲ್ಲಿ ಗಂಡನನ್ನು ಕಳೆದುಕೊಂಡುಬಿಡುತ್ತಾಳೆ. ಆಸೆಗಳೆಲ್ಲ ಭಗ್ನ. ತಂದೆ ತಾಯಿ ಸಹಾಯಕ್ಕೆ ಬಂದಿರಬಹುದು, ಅತ್ತೆಮಾವ ಜೊತೆಯಲ್ಲಿ ಬೆನ್ನೆಲುಬಾಗಿ ನಿಂತಿರಬಹುದು, ಊಟ-ತಿಂಡಿಗೆ ತೊಂದರೆ ಇಲ್ಲದೆ ಜೀವನ ನಡೆಯುತ್ತ ಹೋಗುತ್ತಿರಬಹುದು, ಆದರೆ ಕಟ್ಟಿಕೊಂಡ ಕನಸೆಲ್ಲ ನುಚ್ಚುನೂರಾದ ದುಃಖ ಮಧ್ಯರಾತ್ರಿಯಲ್ಲಿ ದಿಢೀರನೇ ಅವಳನ್ನೆಬ್ಬಿಸಿ ಅಳಿಸುತ್ತದೆ. ಅವಳ ದುಃಖವನ್ನು ಅನುಭವಿಸಿ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಹೊರತು ಕೇಳಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಕೇಳುವದು ಕಡುಕಷ್ಟ.

ಯೌವನದಲ್ಲಿ ಮುದ್ದಿನ ಮಡದಿಯಾಗಿ ಕಾಲಿಟ್ಟ ಗೆಳತಿ, ಕಷ್ಟ ಸುಖಗಳಲ್ಲಿ ಹೆಗಲಾದ ಗೆಳತಿ, ಮಕ್ಕಳನ್ನು ಹೆತ್ತುಕೊಟ್ಟು ಮನೆಯನ್ನು, ಮನಸ್ಸನ್ನು ತುಂಬಿಸಿದ ಗೆಳತಿ, ಗಂಭೀರಸ್ವಭಾವದ ನಮಗೂ ಕಚಗುಳಿಯಿಟ್ಟು ನಕ್ಕು ನಗಿಸಿದ ಗೆಳತಿ, ಸಾಲ ಮಾಡಿಕೊಂಡು ಕೈಯಲ್ಲಿ ಕಾಸಿಲ್ಲದೇ ನಿಂತಾಗ, ಕೊರಳಿಗೊಂದು ಅರಿಶಿನದ ದಾರ ಕಟ್ಟಿಕೊಂಡು ಬಂಗಾರದ ಸರವನ್ನು ನಗುನಗುತ್ತ ಎತ್ತಿಕೊಟ್ಟ ಗೆಳತಿ, ಒಂದು ದಿವಸ ಇಲ್ಲವಾಗಿಬಿಡುತ್ತಾಳೆ. ಮಗ ಸೊಸೆ ಚನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ, ಇಳಿಗಾಲದ ಬದುಕಿನಲ್ಲಿ ಸಮಸ್ಯೆಯಿಲ್ಲ. ಆದರೂ, ಮುಸ್ಸಂಜೆಯ ಸೂರ್ಯಾಸ್ತವನ್ನು ನೋಡುತ್ತ ಕುಳಿತಾಗ ನೆನಪಾಗುತ್ತಾಳೆ. ಕಣ್ಣೀರಾಗಿಬಿಡುತ್ತೇವೆ. ಅವಳಿಲ್ಲದ ಶೂನ್ಯ ಅದೆಷ್ಟು ದೊಡ್ಡದು ಎನ್ನುವದನ್ನು ಇನ್ನೊಬ್ಬರಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲ. ಕೇಳುವದು ಕಡುಕಷ್ಟ.

ಆಸೆಪಟ್ಟು ಮಾಡಿಕೊಂಡ ಮಗು, ಮುದ್ದಾಗಿ ಬೆಳಿಸಿದ ಮಗು, ಹತ್ತಾರು ವರ್ಷ ಜೋಪಾನವಾಗಿ ಬೆಳಿಸಿದ ಮಗು ನಮ್ಮ ಕಣ್ಣ ಮುಂದೆಯೇ ಏನೋ ಕಾರಣಕ್ಕೆ ಹೆಣವಾಗಿ ಬಿದ್ದುಬಿಡುತ್ತದೆ. ಇಡಿಯ ಜೀವನಕ್ಕೆ ಕತ್ತಲೆ ಕವಿದುಬಿಡುತ್ತದೆ. ಸತ್ತು ಹತ್ತಾರು ವರ್ಷಗಳಾಗಿರುತ್ತವೆ, ದುಃಖವನ್ನು ಮರೆತಿದ್ದೇವೆ ಎಂದುಕೊಂಡಿರುತ್ತೇವೆ, ಅಥವಾ ಮನಸ್ಸಿಗೆ ಹಾಗೆ ಸಮಾಧಾನ ಮಾಡಿಸಿರುತ್ತೇವೆ. ಅದ್ಯಾವುದೋ ಸಂಭ್ರಮದ ದಿವಸ, ನಾವು ತುಂಬ ಸಂತೋಷವನ್ನು ಅನುಭವಿಸಿದ ದಿವಸ, ಗಟ್ಟಿಮೊಸರಿನ ಅನ್ನವನ್ನು ಕಲಿಸಿ ತಿನ್ನುವಾಗ ಆ ದುಃಖ ಒತ್ತರಿಸಿ ಬಂದುಬಿಡುತ್ತದೆ. ಮಗನ ಚಿತಗಿಟ್ಟು ಬಂದ ಬೆಂಕಿ ಹೊಟ್ಟೆಯಲ್ಲಿ ಇದ್ದಕ್ಕಿದ್ದ ಹಾಗೆ ಭುಗಿಲೆದ್ದು ಬಿಡುತ್ತದೆ. ಕಲಸಿದ ತುತ್ತನ್ನು ತಿನ್ನಲಿಕ್ಕಾಗದೇ ಎದ್ದುಬಿಡುತ್ತೇವೆ. ಯಾರೇನೇ ಹೇಳಿದರು, ಎಷ್ಟೇ ಸಮಾಧಾನ ಮಾಡಿದರು ಮನಸ್ಸು ಕೇಳುವದಿಲ್ಲ, ದುಃಖದ ಪರ್ವತದ ಅಡಿಯಲ್ಲಿ ಸಿಲುಕಿ ನಲುಗಿ ಹೋಗಿಬಿಟ್ಟಿರುತ್ತದೆ. ಕೇಳುವದು ಕಡುಕಷ್ಟ.

ಮನಸ್ಸಿನಲ್ಲಿ ಯಾವುದೋ ಆಲೋಚನೆ ಮೂಡಿರುತ್ತದೆ. ಅದ್ಭುತವಾದ ಆಲೋಚನೆ. ಅದನ್ನು ಕಾರ್ಯಗತ ಮಾಡಲು ಹರಸಾಹಸ ಪಡುತ್ತೇವೆ. ಬೇಕಾದ ಪರಿಕರಗಳನ್ನೆಲ್ಲ ಸಿದ್ಧ ಪಡಿಸಿಕೊಳ್ಳುತ್ತೇವೆ. ದಿವಸಗಳು, ಮಾಸಗಳು, ವರ್ಷಗಳು ಆ ಕನಸನ್ನು ಸಾಕಿರುತ್ತೇವೆ. ಅದೆಂತಹ ಸಾಹಸವನ್ನಾದರೂ ಮಾಡಲು ಸಿದ್ಧರಿರುತ್ತೇವೆ. ಇಡಿಯ ಜೀವನದ ಸಂಪಾದನೆಯನ್ನು ಒಂದುಗೂಡಿಸಿ, ಸಾಲುವದಿಲ್ಲ ಅಂತ ಸಾಲವನ್ನೂ ಮಾಡಿ,  ಈ ಕನಸನ್ನು ಸಿದ್ಧಗೊಳಿಸಲು ಹೊರಟಿರುತ್ತೇವೆ. ಇನ್ನೇನು ಒಂದು ತಿಂಗಳು ಶ್ರಮ ಪಟ್ಟುಬಿಟ್ಟರೆ ಕನಸು ನನಸಾಗಿಬಿಡುತ್ತದೆ. ತವಕದಿಂದ ಆ ಕ್ಷಣಕ್ಕೆ ಕಾಯುತ್ತಿರುತ್ತೇವೆ. ಹೊಂಚು ಹಾಕಿದ ವಿಧಿ ಒಂದು ಅಪಘಾತವನ್ನು ಮಾಡಿಸಿ ನಮ್ಮ ಕಾಲನ್ನೇ ಕಿತ್ತುಕೊಂಡು ಹೋಗಿಬಿಡುತ್ತದೆ. ಉತ್ಸಾಹದ ಚಿಲುಮೆಯಾದ ವ್ಯಕ್ತಿ ಜೀವಚ್ಛವವಾಗಿ ಹಾಸಿಗೆಯ ಮೇಲೆ ಬೀಳುವ ಪರಿಸ್ಥಿತಿ. ಕನಸು ಕೈಗೂಡಿಲ್ಲವಾದ್ದರಿಂದ ನಮ್ಮವರಿಂದಲೇ ಹೀಯಾಳಿಕೆ. ಕೂಡಿಟ್ಟ ಹಣ ಮಾಯ. ಸಾಲ ತಂದ ಹಣಕ್ಕೆ ಕಟ್ಟ ಬೇಕಾದ ಬಡ್ಡಿ. ಹತ್ತಿರದವರೆಲ್ಲ ದೂರ. ಮುಂದಿನದನ್ನು ಕೇಳುವದು ಕಡುಕಷ್ಟ.

ಹೀಗೆ ವರ್ಷಗಟ್ಟಲೇ ದುಡಿದು ಸಂಪಾದಿಸಿದ ಹಣವನ್ನು ಒಂದು ಕ್ಷಣದ ಮೂರ್ಖತನದಲ್ಲಿ ಕಳೆದುಕೊಂಡಾಗ, ಮೂವತ್ತು ನಲವತ್ತು ವರ್ಷದ ಮರ್ಯಾದೆ ಮಣ್ಣುಪಾಲಾಗಿ ನಿಂತಾಗ, ಮಾಡೇ ಇಲ್ಲದ ತಪ್ಪಿಗೆ, ಆಡೇ ಇಲ್ಲದ ಮಾತಿಗೆ ಹೊಣೆಗಾರರಾಗಬೇಕಾಗಿ ಬಂದಾಗ, ನಮ್ಮ ಒಳ್ಳೆಯತನದ ವರ್ತನೆಯೇ ಮುಳ್ಳಾಗಿ ನಮ್ಮನ್ನು ಚುಚ್ಚಿದಾಗ, ಯಾರನ್ನು ನಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ನಂಬಿದ್ದೇವೋ ಆ ಗೆಳೆಯರೇ ನಮ್ಮ ಕತ್ತನ್ನು ಕೊಯ್ಯುವದು ಗೊತ್ತಾದಾಗ, ಇಷ್ಟಪಟ್ಟು ಮದುವೆಯಾದ ಸಂಗಾತಿ, ನನಗೆ ನೀನು ಬೇಡ ಎಂದು ತೊರೆದು ಹೋದಾಗ, ವಯಸ್ಸಿಗೆ ಬಂದ ಮಕ್ಕಳು, ತಿಂಗಳಿಗಿಷ್ಟು ಹಣ ಕಳಿಸುತ್ತೇವೆ, ನೀನಿಲ್ಲೇ ಇರು ಎಂದು ಹಡೆದ ಕರುಳನ್ನು ಕರುಣೆಯಲ್ಲಿದೆ ಕೊಯ್ದು ಮುಂದೆ ನಡೆದು ಹೋದಾಗ, ಮನುಷ್ಯ ಅನುಭವಿಸುವ ಯಾತನೆ ಶಬ್ದಾತೀತವಾದದ್ದು. ಕಷ್ಟದ ಯಾತನೆಯದು. ಕೇಳವದೂ ಸಹ ಕಡುಕಷ್ಟ.

ಸುಖವಾಗಿದ್ದಾಗ ಬೆಲ್ಲದ ಸುತ್ತಲೂ ಇರುವೆಯಂತೆ ನೆರೆಯುವ ಬಂಧುಗಳೆಲ್ಲ ಕಷ್ಟ ಬಂದಾಕ್ಷಣ ಒಂಟೆಗಳಂತೆ ಕೈಗೆ ಸಿಗದಷ್ಟು ಎತ್ತರಕ್ಕೆ ಕೊರಳೆತ್ತಿ ತಮಗೆ ಸಂಬಂಧವೇ ಇಲ್ಲವೇನೋ ಎಂದು ನಡೆದುಬಿಡುತ್ತಾರೆ. ಅನುಭವಿಸುವ ದುಃಖಕ್ಕೆ ತುಪ್ಪವನ್ನು ಸುರಿಯುತ್ತಾರೆ. ವ್ಯಂಗ್ಯವಾದ ಮಾತುಗಳಿಂದ ಹಿಂಸಿಸುತ್ತಾರೆ, ಕಡೇಪಕ್ಷ ನಮ್ಮನ್ನು ಮನುಷ್ಯರಂತೆ ಸಹ ಕಾಣುವದಿಲ್ಲ. ಯಾತನೆಯಾಗುತ್ತದೆ, ಭರಸಲಾಗದ ಯಾತನೆಯಾಗುತ್ತದೆ.

ಇಂಥ ಬದುಕು ಬೇಕೇ? ಈ ಕಷ್ಟದು ಬಾಳುವೆಯ ಬದುಕೇನು? ಅದನ್ನು ಬಯಸಿ ಫಲವೇನು? ಆ ಬದುಕನ್ನು ಬಾಳಿ ಫಲವೇನು? ಕಾರಣ, ಕನಕದಾಸರು ಬರೆಯುತ್ತಾರೆ – ನಮ್ಮ ಕಣ್ಣಲ್ಲಿ ನೀರು ಸುರಿಯುವಂತೆ ಬರೆಯುತ್ತಾರೆ- ಸುಡುಸುಡುಗಾಳಿಗೊಡ್ಡಿದ ಸೊಡರು ಈ ಸಂಸಾರದೇಳಿಗೆಯು. ನಮ್ಮ ಬದುಕಿನ ಉನ್ನತಿ, ಸುಖ, ಸಂತೋಷಗಳೆಲ್ಲ ಬಿಸಿಬಿಸಿಗಾಳಿಯ ಮಧ್ಯದಲ್ಲಿ ನಿಂತ ದೀಪದಂತೆ. ಆರುವದಿಲ್ಲ, ಖಂಡಿತ ಆರುವದಿಲ್ಲ. ಅದರೆ ಶಾಂತವಾಗಿ ಉರಿಯುವದೂ ಇಲ್ಲ. ಅತ್ತಿತ್ತ ಹೊಯ್ದಾಡುತ್ತದೆ. ಆರಿಯೇ ಹೋಯಿತೇನೋ ಎನ್ನುವ ಹಂತ ತಲುಪುತ್ತದೆ. ಮತ್ತೆ ಇದ್ದಕ್ಕಿದ್ದ ಹಾಗೆ ಜೋರಾಗಿ ಉರಿಯುತ್ತದೆ, ಮತ್ತೆ ತೊಯ್ದಾಡುತ್ತದೆ. ಆ ದೀಪದಂತೆ, ಆ ಸುಡುಸುಡುಗಾಳಿಯ ಹೊಡೆತಕ್ಕೆ ಸಿಕ್ಕು ಹೊಯ್ದಾಡುತ್ತಿರುವ ಸೊಡರಿನಂತೆ ನಮ್ಮ ಬದುಕು ಎನ್ನುತ್ತಾರೆ ಕನಕದಾಸರು. ಮನುಷ್ಯಜೀವನದ ಅಸಹಾಯಕತೆಯನ್ನು, ಅ ಬದುಕಿನಲ್ಲಿ ನಾವು ಅನುಭವಿಸುವ ದುಃಖವನ್ನು ನಮಗೆ ಮನದಟ್ಟು ಮಾಡಿಸುತ್ತಾರೆ ಕನಕದಾಸರು.

ಹೀಗೆ ಬದುಕಿನ ಕಷ್ಟಗಳನ್ನು ಶಬ್ದಗಳಿಂದಲೇ ಕಣ್ಣೀರು ತರಿಸಿ ಚಿತ್ರಿಸಿದು ದಾಸರು ನಮ್ಮ ಬದುಕಿನ ಆ ಸಕಲ ಸಂಕಷ್ಟಗಳಿಗೆ ಪರಿಹಾರವನ್ನೂ ಹೇಳುತ್ತಾರೆ. ಸುಡುಗಾಳಿಯ ಮಧ್ಯದಲ್ಲಿ ಅನಾಥವಾಗಿ ಹೊಯ್ದಾಡುತ್ತಿರುವ ದೀಪದ ಎರಡು ಬದಿಯಲ್ಲಿಯೂ ಕೈಯನ್ನಿಟ್ಟು ರಕ್ಷಿಸುವ ಕರುಣಿಯಂತೆ ನಮ್ಮ ಸೋತ ಮನಸ್ಸಿಗೆ ಸಾಂತ್ವನವನ್ನು ಹೇಳುತ್ತಾರೆ –

ಬಾಳಬೇಕೆಂಬುವಗೆ ನೆರೆ ನಿ-

ಮ್ಮೂಳಿಗವ ಮಿಗೆ ಮಾಡಿ ಭಕ್ತಿಯೊ-

ಳಾಳಿ ಬದುಕುವದುಚಿತ ರಕ್ಷಿಸು ನಮ್ಮನನವರತ

ಪಾಪಕರ್ಮಗಳನ್ನು ಮಾಡಿದ್ದೂ ಸತ್ಯ. ಅದಕ್ಕೆ ತಕ್ಕ ಫಲಗಳನ್ನು ಅನುಭವಿಸುತ್ತಿರುವದೂ ಸತ್ಯ. ಆದರೆ, ಇಂಥಹ ಮನುಷ್ಯಜೀವನವನ್ನೂ ನಮಗೆ ತಕ್ಕಂತೆ ನಾವು ರೂಪಿಸಿಕೊಳ್ಳಬಹುದು. ಕಷ್ಟದ ಧೂಳನ್ನು ಝಾಡಿಸಿ ಎದ್ದು ಹೊರ ಬರಬಹುದು. ಸಮಸ್ಯೆಗಳ ಬೆಟ್ಟವನ್ನು ಎತ್ತಿ ಪಕ್ಕಕ್ಕಿಟ್ಟು ಮುನ್ನಡೆಯಬಹುದು. ಅಂತಹುದೊಂದು ಅದ್ಬುತ ಉಪಾಯವನ್ನು ನಮ್ಮ ಕನಕದಾಸರು ಇಲ್ಲಿ ಹೇಳಿಕೊಡುತ್ತಿದ್ದಾರೆ. “ಬಾಳಬೇಕೆಂಬುವಗೆ” ನಾವು ಚನ್ನಾಗಿ ಬದುಕಬೇಕು ಎಂದು ನಿರ್ಧಾರ ಮಾಡಿದವನು “ನಿಮ್ಮೂಳಿಗವ ಮಿಗೆ ಮಾಡಿ” ತನ್ನ ಇಡಿಯ ಜೀವದ ಪ್ರಯತ್ನದಿಂದ ಶ್ರೀಹರಿಗುರುಗಳ ಸೇವೆಯನ್ನು ಮಾಡಿ “ಭಕ್ತಿಯೊಳು ಆಳಿ ಬದುಕುವದು ಉಚಿತ” ಶ್ರೀಹರಿಗುರುಗಳಲ್ಲಿ ಭಕ್ತಿಯನ್ನು ಮಾಡಿ ಆಳಿ ಬದುಕುವದು ಆರಸರಂತೆ ಬದುಕುವದು ಉಚಿತ ಉತ್ತಮವಾದ ಮಾರ್ಗ.

ನೋಡಿ, ಬದುಕಿನ ಕಷ್ಟದ ಪರಿಸ್ಥಿತಿಗಳಿಗೆ ಯಾರೂ ಹೊರತಲ್ಲ. ನಿಮ್ಮ ರೀತಿಯ ಕಷ್ಟ ನನಗಿರುವದಿಲ್ಲ, ನನಗಿರುವ ಕಷ್ಟ ನಿಮಗಿರುವದಿಲ್ಲ. ಇರುವೆಯ ಭಾರ ಇರುವೆಗೆ, ಆನೆಯ ಭಾರ ಆನೆಗೆ. ಆದರೆ ಇಬ್ಬರೂ ಭಾರವನ್ನು ಹೊರುತ್ತಿರುವದು ಮಾತ್ರ ಸತ್ಯಸ್ಯ ಸತ್ಯ.

ಹೀಗಾಗಿ ನಾನು ಇಲ್ಲಿ ಕಷ್ಟಗಳ ವೈವಿಧ್ಯದ ಕುರಿತು ಮಾತನಾಡುವದಿಲ್ಲ. ಮಾತನಾಡಲು ಸಾಧ್ಯವೂ ಇಲ್ಲ.  ಹಣದ ಸಮಸ್ಯೆ ಎಲ್ಲದಕ್ಕಿಂತ ದೊಡ್ಡ ಸಮಸ್ಯೆ ಎನ್ನುವವರನ್ನು ಆಗಬಾರದ ಸ್ಥಳದಲ್ಲಿ ಕುರುವಾಗಿ ಒದ್ದಾಡುತ್ತಿರುವ ವ್ಯಕ್ತಿಯ ಮುಂದೆ ನಿಲ್ಲಿಸಿ. ಈ ನೋವಿಗಿಂತ ದೊಡ್ಡ ನೋವು ಮತ್ತೊಂದಿಲ್ಲ ಎನ್ನುತ್ತಾನೆ. ಹೆತ್ತ ಮಗ ಸತ್ತು ಬೀಳುವ ಸಂದರ್ಭದಲ್ಲಿ, ಹಡೆದ ಮಗಳು ಮನೆ ಮುರಿದುಕೊಂಡು ಬಂದಿರುವ ಸಂದರ್ಭದಲ್ಲಿ ಗೋಳಿಡುತ್ತಿರುವ ತಂದೆತಾಯಿಗಳ ಬಳಿ ಹೋಗಿ ಹೇಳಿ, ನನಗೆ ಅದೆಂಥ ನೋವಾದರೂ ಬರಲಿ, ಅನುಭವಿಸುತ್ತೇವೆ, ಆದರೆ, ನನ್ನ ಮಗುವನ್ನು ಬದುಕಿಸಿಕೊಡಿ, ನನ್ನ ಮಗಳ ಬದುಕನ್ನು ಸರಿ ಮಾಡಿ ಅಂತ ಗೋಗರೆಯುತ್ತಾರೆ. ಹೀಗಾಗಿ ಅವರವರ ದುಃಖ ಅವರವರಿಗೆ ದೊಡ್ಡದು. ಅದನ್ನು ದಾಸರು ಒಂದೇ ಮಾತಿನಲ್ಲಿ ಹೇಳಿದ್ದಾರೆ, ಕೇಳುವದು ಕಡುಕಷ್ಟ ಎಂದು. ಆದ್ದರಿಂದ ಕಷ್ಟದ ವೈವಿಧ್ಯದ ಬಗ್ಗೆ ಮಾತನಾಡದೇ ಆ ಕಷ್ಟಗಳನ್ನು ದಾಟಿ ಬರುವ ರೀತಿಯ ಬಗ್ಗೆ ಮಾತನಾಡೋಣ, ಶ್ರೀದಾಸರು ಹೇಳಿದ ಉಪಾಯವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡೋಣ.

ನೋಡಿ ಮೊದಲಿಗೆ ಎಲ್ಲ ಕಷ್ಟಗಳ ಪರಿಹಾರಕ್ಕೆ ನಾವು ಪ್ರಯತ್ನಿಸಬಾರದು. ಮೊದಲಿಗೆ ನಮಗೆ ಬೇಕಾದದ್ದು ಅದನ್ನು ಎದುರಿಸುವ ಧೈರ್ಯ. ತಾರಸಿಯಲ್ಲಿ ತೂತಾಗಿ ಮಳೆನೀರು ಸೋರುತ್ತಿದೆ, ಎಂದಾಗ ಆ ಮಳೆಯಲ್ಲಿಯೇ ನಾವು ತಾರಸಿಯನ್ನು ಸರಿ ಮಾಡಲು ಮುಂದಾಗುವದಿಲ್ಲ. ಸೋರುತ್ತಿರುವ ನೀರಿನಿಂದ ಸದ್ಯಕ್ಕೆ ತೊಂದರೆಯಾಗದ ಹಾಗೆ ನೋಡಿಕೊಳ್ಳುತ್ತೇವೆ. ಮಳೆ ನಿಂತ ಬಳಿಕ, ಬೆಳಕು ಹರಿದ ಮೇಲೆ ಆ ತೊಂದರೆಯನ್ನು ಶಾಶ್ವತವಾಗಿ ಮುಚ್ಚಲು ಪ್ರಯತ್ನಿಸುತ್ತೇವೆ. ಹಾಗೆ, ಕಷ್ಟ ಎನ್ನುವದು ಹಾವಿದ್ದ ಹಾಗೆ. ಅದು ಮನೆಯಲ್ಲಿ ನುಸುಳಿ ಬಿಟ್ಟಿದೆ. ನಾವು ಅದನ್ನು ನೋಡಿಯೇ ಎದೆಯೊಡೆದು ಬಿಟ್ಟರೆ, ಸೋತ ಹಾಗೆಯೇ. ಹೀಗಾಗಿ, ನಾನು ಅದನ್ನು ಎದುರಿಸುತ್ತೇನೆ. ಈ ಕಷ್ಟದ ಸರ್ಪವನ್ನು ಕಡಿದು ಹಾಕಿ ನನ್ನ ಮನೆಯಲ್ಲಿ ನಾನು ಸುಖವಾಗಿರುತ್ತೇನೆ ಎನ್ನುವದ ಧೈರ್ಯದ ಮಾತನ್ನು ಮೊದಲಿಗೆ ನಾವು ನಮ್ಮ ಮನಸ್ಸಿಗೆ ಹೇಳಿಕೊಡಬೇಕು.

ನಿಜ, ಇದು ಹೇಳಿದಷ್ಟು ಸಾಧ್ಯವಿಲ್ಲ. ಸಾಧ್ಯವೇ ಇಲ್ಲ. ಇದೊಂದು ಅನುಭವದಿಂದ ಬರುವ ಧೈರ್ಯ. ಅದಕ್ಕಿಂತ ಮುಖ್ಯವಾಗಿ ನಮಗೆ ನಮ್ಮ ಮೇಲಿರುವ ವಿಶ್ವಾಸವಿದ್ದರೆ ಮಾತ್ರ ತಲೆದೋರುವ ಧೈರ್ಯ. ಆ ವಿಶ್ವಾಸ ನಮ್ಮೊಳಗಿರಬೇಕು. ಏನದು ಆ ವಿಶ್ವಾಸ? ಹೇಗಿರುತ್ತದೆ ಆ ಧೈರ್ಯ. ವೇದವ್ಯಾಸದೇವರು ಮಹಾಭಾರತದಲ್ಲಿ ಇದಕ್ಕೆ ಉತ್ತರ ನೀಡಿದ್ದಾರೆ,

“ನ ವಾಸುದೇವಭಕ್ತಾನಾಂ ಅಶುಭಂ ವಿದ್ಯತೇ ಕ್ವಚಿತ್”

“ಶ್ರೀಹರಿಯ ಭಕ್ತರಿಗೆ ಎಂದಿಗೂ ಅಶುಭ ಎನ್ನವದು, ಅಮಂಗಳ ಎನ್ನುವದು ಇಲ್ಲ”

ನೋವಿನ, ಅವಮಾನದ, ಕಷ್ಟದ ಜ್ವಾಲಾಮುಖಿಯಲ್ಲಿ ಬೆಂದು ಹೋಗುವಾಗ, ಒಟ್ಟಾರೆ ಯಾವುದೇ ಕಷ್ಟದ ಸಂದರ್ಭದಲ್ಲಿ  ಒಬ್ಬ ವಿಷ್ಣುಭಕ್ತನ ಮನಸ್ಸಿಗೆ ಬರಬೇಕಾದ ಅನುಸಂಧಾನವಿದು. ನಾನು ಶ್ರೀಹರಿಯನ್ನು ಗುರುಗಳನ್ನು ನಂಬಿದ್ದೇನೆ. ಸರ್ವಥಾ ನಂಬಿದ್ದೇನೆ. ನಮ್ಮ ಶ್ರೀ ಹರಿ ನಂಬಿದವರ ಕೈಬಿಡುವನಲ್ಲ. “ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ” “ನನ್ನ ಭಕ್ತರಿಗೆ ಎಂದಿಗೂ ವಿನಾಶವಿಲ್ಲ, ಅರ್ಜುನ, ಇದನ್ನು ಎಲ್ಲಿ ಬೇಕಾದರೂ ಉದ್ಘೋಷಿಸು” ಎಂದಿದ್ದಾನೆ, ನಮ್ಮ ಶ್ರೀಕೃಷ್ಣ. ಅಂತಹವನ ಚರಣವನ್ನು ನಾವು ನಂಬಿದ್ದೇವೆ. ವಿಷ್ಣುಭಕ್ತರು ನಾವು. ಹರಿದಾಸರು ನಾವು. ಗುರುಚರಣಗಳನ್ನು ಸೇವಿಸುವವರು ನಾವು. ಹೀಗಾಗಿ ನಮಗೆ ಅಮಂಗಳವಾಗುವದಿಲ್ಲ. ಅಶೋಭನವಾದದ್ದು ನಡೆಯುವದಿಲ್ಲ. ಏನೇ ಅಮಂಗಳದಂತೆ, ಅಶೋಭನದಂತೆ ತೋರಿದರೂ ಅದು ಮತ್ತೊಂದು ಭಾಗ್ಯೋದಯವೆಂಬ ಸೂರ್ಯೋದಯದ ಮುಂಚಿನ ಕತ್ತಲಷ್ಟೇ. ಕತ್ತಲು ಗಾಢವಾಗಿದೆ ಎಂದರೆ ಅರ್ಥಾತ್ ಕಷ್ಟಗಳು ಉಲ್ಬಣವಾಗಿವೆ ಎಂದರೆ ಸೂರ್ಯೋದಯ, ಭಾಗ್ಯೋದಯ ಸನ್ನಿಹಿತವಾಗಿದೆ ಅಂತಲೇ ಅರ್ಥ ಎನ್ನುವ ವಿಶ್ವಾಸ ನಮ್ಮಲ್ಲಿರಬೇಕು.

ಶ್ರೀಹರಿಯನ್ನು ಸರ್ವಾತ್ಮನಾ ನಂಬಿದವರಿಗೆ ಈ ಧೈರ್ಯವಿರುತ್ತದೆ. ಅವರು ಅದೆಂತಹ ಕಷ್ಟವನ್ನೂ ಧೈರ್ಯದಿಂದಲೇ ಎದುರಿಸುತ್ತಾರೆ. ಪ್ರಹ್ಲಾದನನ್ನು ಕೊಲ್ಲಲಿಕ್ಕಾಗಿಯೇ ಹಾವುಗಳ ಮಧ್ಯದಲ್ಲಿ ಅವನನ್ನು ಬಿಟ್ಟರೂ ಪ್ರಹ್ಲಾದ ಹೆದರಲಿಲ್ಲ, ಕಷ್ಟವನ್ನು ಎದುರಿಸಿ ಗೆದ್ದ. ಸಮುದ್ರದಲ್ಲಿ ಮುಳುಗಿಸಿದರೂ ಆಟವಾಡುವವನಂತೆ ಎದ್ದು ಬಂದ. ಪಾಂಡವರನ್ನು ಕಾಡಿಗಟ್ಟಿದರೂ ಅವರು ಹೆದರಲಿಲ್ಲ, ಆ ಕಷ್ಟದ ಸಮಯವನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಂಡು ಮತ್ತಷ್ಟು ಬಲಿಷ್ಠರಾದರು, ಅದ್ಭುತವಾದ ಸಾಧನೆಯನ್ನು ಮಾಡಿದರು. ತುಂಬು ಗರ್ಭಿಣಿಯರಾದ ಒಬ್ಬ ಹೆಂಡತಿಯನ್ನು ದೂರಕ್ಕಟ್ಟಿ, ಮತ್ತೊಬ್ಬಳನ್ನು ಕಾರಾಗೃಹದಲ್ಲಿಟ್ಟರೂ ವಸುದೇವ ಧೃತಿಗೆಡಲಿಲ್ಲ. ಎದುರಿಸಿದ. ಕಷ್ಟದಿಂದ ಪಾರಾದ. ಕರಾರುವಾಕ್ಕಾಗಿ ಒಂದು ಸಾವಿರ ವರ್ಷ ಮೊಸಳೆ ಗಜೇಂದ್ರನೊಡನೆ ಹೋರಿದರೂ ಗಜೇಂದ್ರ ಬಿಟ್ಟುಕೊಡಲಿಲ್ಲ. ಕಡೆಗೂ ವಿಷ್ಣುಭಕ್ತಿಯಿಂದಲೇ ಜಯವಾಯಿತು.

ನಮ್ಮಲ್ಲಿ ಮೊದಲು ಇರಬೇಕಾದ್ದು ನಮ್ಮಲ್ಲಿ ವಿಶ್ವಾಸ. ಹೌದು, ನಾನು ವಿಷ್ಣುಭಕ್ತ. ಶಾಸ್ತ್ರ ಹೇಳಿದ ರೀತಿಯಲ್ಲಿಯೇ ಶ್ರೀಹರಿಯನ್ನು ನಂಬಿದವನು. ಗುರುಗಳನ್ನು ಆಶ್ರಯಿಸಿದವನು. ಕಷ್ಟ ಬಂದಿದೆ, ಅವಮಾನವಾಗಿದೆ, ದುಃಖ ಎದುರಾಗಿದೆ ನಿಜ. ಆದರೆ, ಇದು ನನ್ನನ್ನು ನಾನು ತಿದ್ದಿಕೊಳ್ಳಲಿಕ್ಕೆ ಪರಮಾತ್ಮ ನೀಡಿದ ಸದವಕಾಶ. ನಾನು ಇನ್ನೂ ಎತ್ತರಕ್ಕೇರಬೇಕು ಎಂದು ಸಂಕಲ್ಪಿಸಿರುವ ಪರಮಾತ್ಮ ನನ್ನನ್ನು ಸಾಹಸದ ಹೋರಾಟಕ್ಕೆ ಅಣಿ ಮಾಡುತ್ತಿದ್ದಾನೆ. ನಾನು ಹೋರಾಡಬೇಕು. ಧೈರ್ಯದಿಂದ ಸವಾಲನ್ನು ಎದುರಿಸಿ ಜಯವನ್ನು ನನ್ನದಾಗಿಸಿಕೊಳ್ಳಬೇಕು. ಹೀಗೆ ದೃಢಸಂಕಲ್ಪದಿಂದ ನಾವು ಕಷ್ಟವನ್ನು ಎದುರಿಸಬೇಕು. ಕಷ್ಟ ಬಂದ ತಕ್ಷಣ ಕುಗ್ಗುವವರು ವಿಷ್ಣುಭಕ್ತರಲ್ಲ, ಕಷ್ಟ ಬಂದಾಗ ಹಿಗ್ಗಿ ಇದು ನಮ್ಮನ್ನು ಎತ್ತರಕ್ಕೇರಿಸುವ ಪರಮಾತ್ಮನ ಕ್ರೀಡೆ ಎಂದು ತಿಳಿದು ಸಾಹಸ ತೋರಲು ಹೋರಾಟದ ಅಂಗಳಕ್ಕಿಳಿಯುವವರು ವಿಷ್ಣುಭಕ್ತರು.

ನಾವು ಅತ್ತಲಾಗಿ ಯಾವುದೋ ಬಾಬಾನಿಗೂ ಅಡ್ಡ ಬೀಳುತ್ತೇವೆ ಎಂದಾದರೆ, ಬೀದಿಬದಿಯ ಗಿಣಿಶಾಸ್ತ್ರದವನ ಮುಂದೆಯೂ ಚಕ್ಕಳಮಕ್ಕಳ ಹಾಕಿ ಕೂತು ನನಗೇನಾಗುತ್ತದೆ ಎಂದು ಕೇಳುತ್ತೇವೆ ಎಂದಾದರೆ, ಅದ್ಯಾವುದೋ ನಿಂಬೆಹಣ್ಣು ಇನ್ಯಾವುದೋ ತಾಯಿತವನ್ನು ತಂದು ಮನೆಯಲ್ಲಿಟ್ಟು ನಮಗೆ ಒಳ್ಳೆಯದಾಗುತ್ತದೆ ಎಂದು ನಂಬಿದ್ದೇವೆ ಎಂತಾದರೆ ಖಂಡಿತ ನಾವು ವಿಷ್ಣುಭಕ್ತರಲ್ಲ. ಕಾರಣ, ವಿಷ್ಣುಭಕ್ತರು ಶ್ರೀಹರಿಯನ್ನು ಗುರುಗಳನ್ನು ಶಾಸ್ತ್ರವನ್ನು ಮಾತ್ರ ನಂಬುತ್ತಾರೆಯೇ ಹೊರತು, ಕಂಡಕಂಡವರ ಮುಂದೆ ಕಷ್ಟವನ್ನು ಬಿಚ್ಚಿಟ್ಟು ಅಂಗಲಾಚುವದಿಲ್ಲ. “ಹಾಡಿದರೆ ಎನ್ನೊಡೆಯನ ಹಾಡುವೆ, ಬೇಡಿದರೆ ಎನ್ನೊಡೆಯನ ಬೇಡುವೆ, ಒಡೆಯಗೆ ಒಡಲನು ತೋರುವೆ” ಎಂದು ಧೈರ್ಯವಾಗಿ ಉದ್ಘೋಷಿಸಬಲ್ಲ ವ್ಯಕ್ತಿ ಮಾತ್ರ ವಿಷ್ಣುಭಕ್ತನಾಗಲು ಸಾಧ್ಯ.

ನಾವು ವಿಷ್ಣುಭಕ್ತರು ಹೌದೋ ಅಲ್ಲವೋ ಎನ್ನುವದನ್ನೂ ನಿರ್ಧರಿಸುವ ತಾಕತ್ತು ಕಷ್ಟಕಾಲಕ್ಕಿದೆ.

ಶ್ರೀಹರಿಯ ಚರಣದಾಸರು ಕಷ್ಟಗಳನ್ನು ಕಾಣಬೇಕಾದ ರೀತಿಯನ್ನು ಅರ್ಥಮಾಡಿಕೊಂಡೆವು, ಆ ಕಷ್ಟವನ್ನು ಎದುರಿಸುವ ರೀತಿಯನ್ನು ತಿಳಿಯೋಣ, ನಾಳೆಯ ಲೇಖನದಲ್ಲಿ.

(ವಿ.ಸೂ. ಇದು ನನ್ನ ಸಾರಾಮೃತವ್ಯಾಖ್ಯಾನದ ಭಾಗವಲ್ಲ. ಶ್ರೀ ಕನಕದಾಸರ ಹರಿಭಕ್ತಿಸಾರದ ಈ ಪದ್ಯದ ಕುರಿತು ಬರೆಯುತ್ತಿರುವ ಪ್ರತ್ಯೇಕ ಲೇಖನ. ಹರಿಭಕ್ತಿಸಾರದ ವ್ಯಾಖ್ಯಾನ ಪದ್ಯಗಳ ಸಂಖ್ಯೆಗೆ ಅನುಸಾರವಾಗಿ ಮುಂದುವರೆಯುತ್ತದೆ. )

ಕಷ್ಟ-ದುಃಖ-ನೋವು-ಅವಮಾನಗಳನ್ನು ಎದುರಿಸುವ ರೀತಿಯನ್ನು ಬರೆಯುತ್ತ ಹೋಗುತ್ತೇನೆ. ಈ ಲೇಖನಗುಚ್ಛಗಳನ್ನು ನಿಮ್ಮೆಲ್ಲ ಬಾಂಧವರಿಗೆ ತಲುಪಿಸಿ, ಆ ಮುಖಾಂತರ ಅವರ ನೋವನ್ನು ಕಿಂಚಿತ್ತು ಕಡಿಮೆ ಮಾಡೋಣ, ಅವರಿಗೆ ಸಮಸ್ಯೆಗಳನ್ನು ಎದುರಿಸುವ ಧೈರ್ಯವನ್ನು ತುಂಬೋಣ. ಒಬ್ಬರ ದುಃಖದಲ್ಲಿ ಭಾಗಿಯಾಗಿ ಅದನ್ನು ಪರಿಹರಸಲು ಪ್ರಯತ್ನಿಸುವದೂ ಸಹ ವಿಷ್ಣುಭಕ್ತರ ಆದ್ಯಕರ್ತವ್ಯ.

– ವಿಷ್ಣುದಾಸ ನಾಗೇಂದ್ರಾಚಾರ್ಯ.