ಶ್ರೀ ವಿಜಯೀ೦ದ್ರತೀರ್ಥಕೃತ ದುರಿತಾಪಹಾರ ಸ್ತೋತ್ರ – ಒಂದು ಚಿಂತನೆ

ಶ್ರೀ ವಿಜಯೀ೦ದ್ರತೀರ್ಥಕೃತ ದುರಿತಾಪಹಾರ ಸ್ತೋತ್ರ – ಒಂದು ಚಿಂತನೆ

Viji1

ಅದ್ಭುತ ಪ್ರತಿಭೆಯೇ ಮೂರ್ತಿವೆತ್ತಂತಿರುವ ಅಮಾನುಷಚರ್ಯೆಯ ಶ್ರೀ ವಿಜಯೀ೦ದ್ರತೀರ್ಥರು ರಚಿಸಿರುವ ” ದುರಿತಾಪಹಾರ ಸ್ತೋತ್ರ ” ವು ಕಲಿಕಾಲದ ಮಾನವನು ಪ್ರತಿನಿತ್ಯವೂ ತನ್ನ ತಲೆ ಮೊದಲು ಕಾಲಿನ ವರೆಗಿನ ಅವಯವಗಳಿಂದ ಮಾಡುತ್ತಿರುವ ಪಾಪರಾಶಿಯ ಕೋಶದಂತಿದೆ.

ಕಣ್ಣು – ಕಿವಿ – ನಾಲಿಗೆ – ಮೂಗು – ಚರ್ಮ ಎಂಬ ಐದು ಜ್ಞಾನ ಜನಕ ಇಂದ್ರಿಯಗಳಿಂದಲೂ; ವಾಕ್ – ಪಾಣಿ – ಪಾದ – ಪಾಯು – ಗುಹ್ಯೇ೦ದ್ರಿಗಳೆಂಬ ಐದು ಕರ್ಮೇಂದ್ರಿಗಳ ಮೂಲಕವಾಗಿಯೂ ನಿರಂತರದಲ್ಲೂ ಆಗುತ್ತಲಿರುವ ಪಾಪ ಕರ್ಮಗಳ ಮರ್ಮ ಸೂಚಕವಾದ ಸೂಜಿಗಲ್ಲಿನಂತಿದೆ.

ಎಂಥಹ ಕಡು ಪಾಪಿಯೂ ಕಲ್ಲಿನಂತಹಾ ಮನಸ್ಸನ್ನೂ ಸಹ ಪಾಪ ಮಾರ್ಗದಿಂದ ಸನ್ಮಾರ್ಗಕ್ಕೆ ಸೆಳೆಯುವ ಸುಳಿಯಂತಿದೆ.

ಘೋರವಾದ ಪಾಪ ಕೂಪದಲ್ಲಿ ಮುಳುಗಿದವನಾಗಿ; ಪಾಪಾ೦ಧಕಾರಮಯ ಜೀವಿಯಾಗಿ; ಪಾಪ ಪರಂಪರೆಯಿಂದ ಬಿಡುಗಡೆ ಪಡೆಯುವ ಹೆದ್ದಾರಿಯನ್ನು ಕಾಣದಂತೆ ದುಃಖಮಯವಾದ ಜೀವನ ಯಾತ್ರೆಯಲ್ಲಿ ನಿತ್ಯವೂ ನೊಂದು – ನೊಂದು; ಬೆಂದು ಬೆಂಡಾಗಿ ಬಳಲಿದ ಓರ್ವ ಕಡು ಪಾಪಿಯ ಹೇಯವಾದ ಜೀವನ ಚರ್ಯೆಯನ್ನು ಮನಮುಟ್ಟುವಂತೆ ವರ್ಣಿಸಿರುವ; ಪಶ್ಚಾತ್ತಾಪ ಬುದ್ಧಿಯಿಂದ ಪರಿತಪಿಸಿ; ಕಟ್ಟಕಡೆಗೆ ವೈರಾಗ್ಯ ಬುದ್ಧಿಯಿಂದ ಸರ್ವೋತ್ತಮನಾದ ಪರಮಾತ್ಮನಲ್ಲಿ ಮೊರೆಹೋಗುವವನ ಪಶ್ಚಾತ್ತಾಪ ಪ್ರಾಯಶ್ಚಿತ್ತ ರೂಪವಾದ ಕಾವ್ಯದಂತಿದೆ ಈ ” ಪಾಪವಿಮೋಚನ ಸ್ತೋತ್ರ “!

ವಿವಿಧ ಸಾಂಸಾರಿಕ ದುಃಖದರ್ಶನದಿಂದ ಪರಿತಪ್ತನಾದವನ ದಾರುಣ ಸಂಗತಿಯನ್ನು ಎತ್ತಿ ತೋರಿಸಿ; ಮೋಕ್ಷ ಯೋಗ್ಯನಾದ ಚೇತನನ ವಿಷಯದಲ್ಲಿ ದಯಾಮಯನಾದ ಪರಮಾತ್ಮನ ಅನುಗ್ರಹ ವಿಶೇಷದಿಂದ ಅನಾದಿಯಾದ ಭಾವರೂಪವಾದ ಅಜ್ಞಾನವೆಂಬ ( ಅವಿದ್ಯೆಯೆಂಬ ); ಶಯ್ಯೆಯಿಂದ ( ಹಾಸಿಗೆಯಿಂದ ); ಉತ್ತಿಷ್ಠತ ( ಎದ್ದೇಳಿ ); ಜಾಗ್ರತ ( ಎಚ್ಚೆರಗೊಳ್ಳಿ ); ಪ್ರಾಪ್ಯ ವರಾನ್ ನಿಬೋಧತ ( ಶ್ರೇಷ್ಠರಾದ ನಿಯತ ಗುರುಗಳನ್ನು ಸೇರಿ ಪರಮಾತ್ಮನನ್ನು ತಿಳಿಯಿರಿ ) ಎಂಬ ದಿವ್ಯ ವೇದವಾಣಿಯ ಸೂಚನೆಯಂತೆ ಪೂರ್ವ ಪುಣ್ಯ ಪ್ರಭಾವದಿಂದ ಎಚ್ಚರಗೊಂಡು ಆ ದಯಾಮಯನಾದ; ಸರ್ವಸ್ವಾಮಿಯಾದ; ಸರ್ವೋತ್ತಮನಾದ ದೇವದೇವನಲ್ಲಿ ಅಡಿಗಡಿಗೂ; ನುಡಿನುಡಿಗೂ; ಕ್ಷಣಕ್ಷಣಕ್ಕೂ ಅಂಗಲಾಚಿ ಕ್ಷಮೆ ಬೇಡಿ, ಅನನ್ಯ ಗತಿಕನಾಗಿ ಪ್ರಾರ್ಥಸಿ ” ತ್ವಮೇವ ಶರಣಂ ಮಮ ” ( ನೀನೇ ಗತಿ ); ಶ್ರೀಮನ್ನಾರಾಯಣನ ಎರಡೂ ಪಾದಗಳನ್ನು ಶರಣು ಹೊಂದಿದ್ದೇನೆ, ಮೋಕ್ಷಾಪೇಕ್ಷಿಯಾದ ನಾನು ಮೋಕ್ಷಪ್ರದನಾದ ಮುಕುಂದನನ್ನು ಶರಣನನ್ನಾಗಿ ಹೊಂದುತ್ತೇನೆ ಎಂಬುದಾಗಿ ತಿಳಿಸುವ ಮಾತ್ರಾರ್ಥದ ಸಾರರೂಪವಾಗಿದೆ!!

” ಭಗವದ್ಗೀತಾ ” ದಲ್ಲಿ…

ಸರ್ವಧರ್ಮಾನ್ ಮಾಮೇಕಂ ಶರಣಂ ವ್ರಜ ।
ಅಹಂ ತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚ: ।।

ವೇದ ವಿರುದ್ಧಗಳಾದ ಇತರ ಧರ್ಮಗಳನ್ನು ದೂರ ಮಾಡಿ ( ಬಿಟ್ಟು ) ಅಥವಾ ಸರ್ವ ಅವೈಷ್ಣವ ಧರ್ಮಗಳನ್ನು ಪರಿತ್ಯಜಿಸಿ ಫಲಾಪೇಕ್ಷೆ ಇಲ್ಲದಂತೆ; ನಾನೇ ( ಶ್ರೀ ಕೃಷ್ಣ ಪರಮಾತ್ಮನಾದ ನಾನೇ ) ಸರ್ವೋತಮನೆಂದು ತಿಳಿದು; ಅವನಲ್ಲಿಯೇ ( ಶ್ರೀ ಕೃಷ್ಣನಲ್ಲಿಯೇ ) ಸರ್ವದಾ ಸರ್ವಾಧಿಕವಾದ ಪ್ರೇಮ ಪೂರ್ವಕವಾಗಿ ಸರ್ವವನ್ನೂ ಅರ್ಪಿಸುತ್ತಾ; ಮೂರು ಬಗೆಯಾದ ಸಕಲ ವ್ಯಾಪಾರಗಳನ್ನೂ ಅವನ ( ಶ್ರೀ ಕೃಷ್ಣನ ) ಪೂಜಾ ರೂಪವಾದುದೆಂದು ಅನುಸಂಧಾನ ಮಾಡುತ್ತಾ…

ನಾನು ಅವನ ದಾಸ ( ಭಕ್ತ ); ಅವನಾದರೂ ನನ್ನ ಸ್ವಾಮಿ ( ರಕ್ಷಕ ) ಎಂದು ನೆನೆಯುತ್ತಾ ನಿತ್ಯ ನಿರಂತರದಲ್ಲೂ ಸರ್ವೋತ್ತಮನಾದ ಆ ಪರಮಾತ್ಮನ ( ಶ್ರೀ ಕೃಷ್ಣನ ) ಅನುಚಿಂತನೆಯೆಂಬ ಶರಣಾಗತಿಯನ್ನು ಪಡೆದ ಭಕ್ತನನ್ನು ನಾನು ಸರ್ವ ಪಾಪಗಳಿಂದಲೂ ಬಿಡುಗಡೆ ಮಾಡುತ್ತೇನೆಂಬ ಪರಮಾತ್ಮನ ದಿವ್ಯ ಸಂದೇಶದಂತೆಯೂ; ಆತ್ಯಂತಿಕವಾಗಿ ಆ ಸರ್ವೋತ್ತಮನಾದ ಶ್ರೀ ಕೃಷ್ಣ ಪರಮಾತ್ಮನಲ್ಲಿ ಶರಣಾಗತಿಯನ್ನು ಸಂಸಾರ ಕ್ಲೇಶ ಪರಂಪರೆಯಾದ ಪ್ರಕ್ಷುಬ್ಧವಾದ ಮನಸ್ಸಿಗೆ ಭಕ್ತಿ ಭಾವವನ್ನು ಖಚಿತ ಪಡಿಸುವ; ಪ್ರಾಥಿಸುವ ಪ್ರಾರ್ಥನೆ ಮಾಲಿಕೆಯಂತಿದೆ.

ಇಡೀ ಮಾನವನ ಜೀವನ ಕ್ಷೆತ್ರದಲ್ಲಿ ವಿಚ್ತ್ರವಾದ ವ್ಯತ್ಯಾಸವನ್ನುಂಟು ಮಾಡಿ ಆ ಬಿಂಬ ರೂಪಿಯಾದ ದಯಾಮಯನ ದಿವ್ಯ ಸಾಕ್ಷಾತ್ಕಾರಕ್ಕೆ ತಕ್ಕಂತಹ ಅಡಿಪಾಯದಂತಿರುವ ವೈರಾಗ್ಯದಿಂದ ದೃಢವಾದ ಭಕ್ತಿಯನ್ನು ತಂದುಕೊಡುವ ಶರಣಾಗತಿ ಮಂತ್ರದ ರಹಸ್ಯವಾದ ಸ್ವಾರಸ್ಯದಿಂದ ಗರ್ಭಿತವಾಗಿದೆ.

ಇದೇ ವಿಷಯವು ” ಶ್ರೀ ಮಹಾವಿಷ್ಣು ಪುರಾಣ ” ದಲ್ಲಿ…

ಸರ್ವೋತ್ತಮತ್ವ ವಿಜ್ಞಾನ ಪೂರ್ವಂ ತತ್ರ ಮನಃ ಸದಾ ।
ಸರ್ವಾಧಿಕ ಪ್ರೇಮಯುಕ್ತ೦ ಸರ್ವಸ್ಯಾತ್ಮ ಸಮರ್ಪಣಮ್ ।।
ಅಖಂಡಾ ತ್ರಿವಿಧಾ ಪೂಜಾ ತದ್ರತೈವ ಸ್ವಭಾವತಃ ।
ರಕ್ಷತೀತ್ಯೇವ ವಿಶ್ವಾಸಃ ತದೀಯೋsಹಮಿತಿ ಸ್ಮೃತಃ ।।
ಶರಣಾಗತಿರೇಷಾ ಸ್ಯಾತ್ ವಿಷ್ಣು: ಮೋಕ್ಷಫಲಪ್ರದಾ ।।

” ರಾಮಾಯಣ ” ದಲ್ಲಿ….

ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ ।
ಅಭಯಂ ಸರ್ವಭೂತೇಭ್ಯೋ ದದಾಮೇತಾತ್ ವ್ರತಂ ಮಮ ।।

ದೃಢ ಚಿತ್ತದಿಂದ ಏಕಾಂತ ಭಕ್ತಿಯಿಂದ ಯಾವನು ನನ್ನನ್ನೇ ಮೊರೆಹೋಗುತ್ತಾನೆಯೋ ಅವನಿಗೆ ಯಾವ ಕಾಲದಲ್ಲಿಯೂ ಯಾರಿಂದಲೂ ಭಯವಿಲ್ಲವೆಂದು ಶ್ರೀ ರಾಮಚಂದ್ರದೇವರು ಭಕ್ತನಿಗೆ ಅಭಯವನ್ನಿತ್ತಿರುತ್ತಾನೆ!!

” ಶ್ರೀ ಪಂಚರಾತ್ರ ” ದಲ್ಲೂ ಶರಣಾಗತಿಯ ಪ್ರಕಾರಗಳು….

ಅನುಕೂಲಸ್ಯ ಸಂಕಲ್ಪ: ಪ್ರತಿಕೂಲಸ್ಯ ವರ್ಜನಮ್ ।
ರಕ್ಷಿಪ್ಯತೀತಿ ವಿಶ್ವಾಸಃ ಗೋಪ್ತೃತ್ವವರಣಂ ತಥಾ ।।
ಆತ್ಮ ನಿಕ್ಷೇಪಕಾರ್ಪಣ್ಯೇ ಷಡ್ವಿಧಾ ಶರಣಾಗತಿ: ।
ಅನಯಾ ಚ ಪ್ರಪತ್ಯಾ ಮಾಂ ಆಕಿಂಚನೈಕಪೂರ್ವಕಮ್ ।।
ಮಾಂ ಮಾಧವ ಇತಿ ಜ್ಞಾತ್ವಾ ಮಾಂ ಗಚ್ಛೇಚ್ಛರಣಂ ನರಃ ।
ಏವಂ ಮಾಂ ಶರಣಂ ಗಚ್ಛನ್ ಕೃತಕೃತ್ಯೋ ಭವಿಷ್ಯತಿ ।।

ಹಿಂದೆ ಹೇಳಿದ ಶ್ರೀ ಮಹಾವಿಷ್ಣು ಪುರಾಣ ವಚನದ ಅಭಿಪ್ರಾಯವೇ ಈ ಪಂಚರಾತ್ರದ ವಚನವಾಗಿದೆ. ಈ ಪಾಪವಿಮೋಚನ ಸ್ತೋತ್ರದ ಮುಖ್ಯ ತಾತ್ಪರ್ಯವೂ ಸಹ ಇದೇ ಆಗಿರುತ್ತದೆ.

viji 2

ಈ ಸ್ತೋತ್ರವು ಹಿಂದೆಯೇ ಹೇಳಿರುವಂತೆ ಘೋರವಾದ ಈ ಕಲಿಕಾಲದಲ್ಲಿ ಪಾಪಿಗಳ ಸಂಸರ್ಗದಿಂದ ನಿತ್ಯವೂ ಪಾಪ ಕಾರ್ಯಾಚರಣೆಯಿಂದ ಅತಿಯಾಗಿ ನೊಂದಿರುವ ಮಾನವನ ಜೀವನ ಕ್ಷೇತ್ರದಲ್ಲಿ ನಡೆಯಲಿರುವ ನೈಜ ಸಂಗತಿಯನ್ನು ಚಿತ್ರಿಸಿರುವುದಾಗಿದೆ.

ಅತಿಕ್ರಾಂತಸುಖಾ: ಕಾಲಾ: ಪ್ರತ್ಯುಪಸ್ಥಿತದಾರುಣಃ ।
ಶ್ವ: ಶ್ವ: ಪಾಪೀಯದಿವಾಸಃ ಪೃಥುವೀ ಗತಯೌವನಾ ।।

ಎಂಬ ಭಾರತಾಚಾರ್ಯರ ವಚನದಂತೆ ಈ ಕಲಿಯುಗದಲ್ಲಿ ಇಂದಿಗಿಂತಲೂ ಮುಂದೆ ಮುಂದಿನ ದಿನಗಳು ಪಾಪೀಯ ದಿನಗಳಾಗಿವೆ.

ಈ ಸ್ತೋತ್ರದಲ್ಲಿ ಹೇಳಿರುವ ” ಮೇ, ಮಮ, ಅಹಂ ” ಇತ್ಯಾದಿ ಪದಗಳು ಇದನ್ನು ಮಾನವನಿಗೆ ಸಂಬಂಧಿಸತಕ್ಕುದ್ದಾಗಿದೆ.

” ಪಾಪೊsಹಂ ಪಾಪಕರ್ಮಾಹಂ ಪಾಪಾತ್ಮ ಪಾಪಸಂಭವಃ ”

ಇತ್ಯಾದಿ ವಾಕ್ಯಗಳಿಂತಿವೆಯೆಂಬುದನ್ನು ಗಮನಿಸಬೇಕು.

” ಜಿತಂತೇ ಸ್ತೋತ್ರ ” ದಲ್ಲಿ…

ಋಜುವರೇಣ್ಯರೂ; ಜೀವೋತ್ತಮರಾದ ಶ್ರೀ ಚತುರ್ಮುಖ ಬ್ರಹ್ಮದೇವರು ಸರ್ವೋತ್ತಮನಾದ ಶ್ರೀ ಹರಿಯನ್ನು ಕುರಿತು…

ಕೃಶ೦ ಕೃತಘ್ನ೦ ದುಷ್ಕರ್ಮಕಾರಿಣಂ ಪಾಪಭಾಜನಮ್ ।
ಅಪರಾಧಸಹಸ್ರಾಣಾಮಾಕರಂ ವಿಷಯಾರ್ಣವಾಮಗ್ನ೦ ।।

ಇತ್ಯಾದಿಯಾಗಿ ತಮ್ಮನ್ನು ಬಣ್ಣಿಸಿಕೊಂಡಂತೆ ಇಲ್ಲಿಯೂ ತಿಳಿಯಬೇಕು.

ಶ್ರೀ ಇಂದ್ರದೇವರ ಅಂಶ ಸಂಭೂತರೂ, ಸರ್ವಜ್ಞ ಕಲ್ಪರಾದ ಶ್ರೀ ಜಯತೀರ್ಥರು ಭಕ್ತಿ ವಿವಶರಾಗಿ ಶ್ರೀಮದ್ವಿಷ್ಣುತತ್ತ್ವ ನಿರ್ಣಯ ಟೀಕಾ ಅಂತ್ಯದಲ್ಲಿ…

ಆನಂದತೀರ್ಥ ಭಗವದ್ವಚಸಾಂ ವಿಶಿಷ್ಟ
ವ್ಯಾಖ್ಯಾನ ಕರ್ಮಣಿ ಸುರಾ ಅಧಿಕಾರಿಣೋsತ್ರ ।
ಯನ್ಮಾದೃಶೋsಪಿ ಯತತೇ ತದತೀವ ಹಾಸ್ಯ೦
ಕಿಂ ನಾಮ ಭಕ್ತಿವಿವಶಸ್ಯ ವಿಭೂಷಣಂ ತತ್ ।।

ಎಂದು ತಮ್ಮನ್ನು ಕುರಿತು ಆಡಿಕೊಂಡಿರುವಂತೆ ತಿಳಿಯಬೇಕು ಮತ್ತು ಸ್ವಾಹಂಕಾಖಂಡನ ದೃಷ್ಟಿಯಿಂದಲೂ ಈ ತೆರನಾಗಿ ಹೇಳಿಕೊಂಡಿರುವುದಕ್ಕೆ ಅನೇಕ ಉದಾಹರಣೆಗಳಿವೆ.

ಶ್ರೀಮದಾನುವ್ಯಾಖ್ಯಾನಕ್ಕೆ ವ್ಯಾಖ್ಯಾನವಾದ ” ಶ್ರೀಮನ್ನ್ಯಾಯಸುಧಾ ” ಗ್ರಂಥದಲ್ಲಿ ಶ್ರೀ ಜಯತೀರ್ಥರು ಶ್ರೀಮದಾಚಾರ್ಯರ ಗ್ರಂಥಕ್ಕೆ ತಕ್ಕ ವ್ಯಾಖ್ಯಾನವನ್ನು ರಚಿಸಲು ಇತರ ಶಾಸ್ತ್ರ ಪಾಂಡಿತ್ಯ ಪ್ರೌಢಿಮೆಯು ತಮ್ಮಲ್ಲಿ ಶ್ರೀ ಹರಿವಾಯುಗುರುಗಳ ಅನುಗ್ರಹದಿಂದಿರುವುದಾದರೂ ಆರಂಭದಲ್ಲಿ…

” ನ ಶಬ್ದಾಬ್ದೌ ಗಾಢಾ: ”

ಇತ್ಯಾದಿಯಾಗಿ ಹೇಳಿರುವಂತೆಯೂ; ಕೊನೆಯೆಲ್ಲಿಯೂ…

ಪರಂ ಶ್ರದ್ಧಾ ಜಾಡ್ಯಾದಕೃಷಿ ಕೃತಿಮಾಚಾರ್ಯ ವಚಸಿ
ಸ್ಖಲನ್ನಪ್ಯೇತಸ್ಮಾಜ್ಜಗತಿ ನಹಿ ನಿಂದೋsಸ್ಮಿ ವಿದುಷಾಮ್ ।।

ಎಂಬುದಾಗಿಯೂ, ಶ್ರೀ ಪರಿಮಳಾಚಾರ್ಯರೂ ಕೂಡಾ ” ಪರಿಮಳ ” ದ ಅಂತ್ಯದಲ್ಲಿ…

ಜ್ಞಾನಾಬ್ಧಿರಪ್ಯವಾದೀದ್ಯತ್ ಸ್ಖಲತ್ಯಂ ಸ್ವಾತ್ಮನಃ ಸದಾ ।
ಮಾದೃಶಾನಾ೦ ಸ್ಖಲತ್ವಂ ಕಿಂ ವಾಚ್ಯಂ ಕ್ಷಾಮ್ಯಂತು ತದ್ಬುಧಾ: ।।

ಎಂದು ನುಡಿದಿರುತ್ತಾರೆ!!

ಇದೇ ರೀತಿ ಆಯಾ ಪಾಪಗಳನ್ನು ಮಾಡಿರುವ ಭಕ್ತನು ಆಡಿರುವ ಮಾತಿನೆಂತೆಂಬ ದೃಷ್ಟಿಯಿಂದ ಮತ್ತು ಅಭಿಪ್ರಾಯದಿಂದ ಶ್ರೀ ವಿಜಯೀ೦ದ್ರತೀರ್ಥರು ಅದನ್ನು ಎತ್ತಿ ತೋರಿಸುತ್ತಾರೆ!!

ಶ್ರೀ ಜಗನ್ನಾಥದಾಸರು…

ಸಿರಿ ರಮಣ ತವ ಚರಣ ಸೇವೆ ।
ದೊರಕುವುದು ಹ್ಯಾಂಗಿನ್ನು ।
ಪರಮ ಪಾಪಿಷ್ಠ ನಾನು ।।

ಎಂದು ನಮ್ಮನ್ನು ಉಧ್ದೇಶಿಸಿ ಹೇಳಿದ್ದಾರೆ!!

ಎಂಥಹಾ ಸದಾಚಾರಿಯೇ ಆಗಲೀ ಆತನಿಂದ ಈ ಭೂಲೋಕದಲ್ಲಿನ ಮಾನವ ಜನ್ಮದಲ್ಲಿ ಅತಿ ತೃಪ್ತಿಕರವಾಗಿ ಲೇಶಮಾತ್ರವೂ ಲೋಪವಿಲ್ಲದಂತೆ ವಿಧಿ ವಿಹಿತಗಳಾದ ನಿತ್ಯ ನೈಮಿತ್ತಿಕ ಕರ್ಮಗಳನ್ನು ಆಚರಿಸಲು ಸಾಧ್ಯವೇ ಇಲ್ಲ. ಈ ವಿಷಯವನ್ನು ” ಶ್ರುತಿ ” ಯಲ್ಲಿ…

ವಿಧಿವಿಹಿತಂ ಸರ್ವಮನುತಿಷ್ಠ೦ತಿ ದೇವಾ: ।
ಅರ್ಥಮೇವ ಮುನಯಃ ।
ದಶಾಂಶತೋ ಮನುಷ್ಯಾ: ।। ಇತಿ ಶ್ರುತೇ: ।।

ದಿನದಿನಕ್ಕೂ ರಾಶಿರಾಶಿಯಾಗಿ ಗುಂಪು ಕೂಡುತ್ತಿರತಕ್ಕ ಪ್ರಾರಭ್ದೇತರಗಳಾದ ಸಂಚಿತ ಕರ್ಮಗಳ ನಾಶಕ್ಕೆ ಬಿಂಬ ರೂಪಿಯಾದ ಪರಮಾತ್ಮನ ದಿವ್ಯ ಸಾಕ್ಷಾತ್ಕಾರ ಹೊರತು ಬೇರೆ ಉಪಾಯವೇ ಇಲ್ಲ.

ಗೀತಾಚಾರ್ಯನಾದ ಶ್ರೀ ಕೃಷ್ಣನ ವಚನ…

ಜ್ಞಾನಾಗ್ನಿ: ಸರ್ವಕರ್ಮಾಣಿ ಭಸ್ಮಸಾತ್ಕುರುತೇsರ್ಜುನಃ ।

ಜೀವನಿಗಿರತಕ್ಕ ಸಕಲ ಬಂಧಗಳಿಗೂ ಆ ಪರಮಾತ್ಮನೇ ಸ್ವಾಮಿಯಾಗಿದ್ದಾನೆ. ಬಂಧಕನೂ – ಬಂಧವಿಮೋಚಕನೂ – ಕೈವಲ್ಯದಾತನೂ ಆದ ಪರಬ್ರಹ್ಮನೆಂದೆನಿಸಿರುವ ಆ ಸರ್ವೋತ್ತಮನನ್ನೇ ಶರಣು ಹೋಗಬೇಕು. ಅನ್ಯಥಾ ಗತಿಯೇ ಇಲ್ಲ!!

” ದುರಿತಾಪಹಾರ ಸ್ತೋತ್ರ ”

ಆದಿ :

ಸುಕೃತಂ ತಿಲಮಾತ್ರತುಲ್ಯಮೀಶ ಕ್ರಿಯತೇ ನೈವ ಮಯೈಕವತ್ಸರೇಪಿ ।
ಅಪಿ ತು ಕ್ರಿಯತೇ ಸದಾಘಪೂಗ: ಪ್ರತಿಯಾಮಂ ಸಕಲೇಂದ್ರಿಯೈರ್ಮೂಕುಂದ: ।।

ಅಂತ್ಯ :

ವಿಜಯೀ೦ದ್ರಯತೀಶ್ವರೋ ವ್ಯತಾನೀತ್ ಸ್ತುತಿಮೇನಾ೦ ದುರಿತಾಪಹಾಂ ಮುರಾರೇ: ।
ಪರಮಾದರತಃ ಸದಾ ಪಠದ್ಯೋ ನಿಖಿಲೈ: ಪಾಪಚಯೈರ್ಭವೇ ಸ ಮುಕ್ತ: ।।

ಇಂಥಹಾ ದುರಿತಾಪಹರ ಸೂತ್ರವನ್ನು ಯಾರು ನಿತ್ಯವೂ ಪಠಿಸುತ್ತಾರೆಯೋ ಅಂಗಲಾಚಿ ಪರಮಾತ್ಮನನ್ನು ಬಿಡುತ್ತಾರೆಯೋ ಅವರು ಕೃಪಾ ಸಮುದ್ರನಾದ ಶ್ರೀ ಹರಿಯ ಪರಮಾನುಗ್ರಹಕ್ಕೆ ಪಾತ್ರರಾಗುವುದರಲ್ಲಿ ಲೇಶಮಾತ್ರವೂ ಸಂದೇಹವಿಲ್ಲ!

ಅಂಥಹಾ ಶ್ರೀ ಹರಿಯ ವಿಶೇಷ ಅನುಗ್ರಹದಿಂದ ಕ್ರಮವಾಗಿ ಬಿಂಬ ಸಾಕ್ಷಾತ್ಕಾರವನ್ನು ಪಡೆದು ಅಪರೋಕ್ಷಜ್ಞಾನಿ ಎನಿಸಿಕೊಂಡವರಾಗಿ ಸಕಲ ಸಂಚಿತ ಪಾಪ ರಾಶಿಯಿಂದ ಬಿಡುಗಡೆಯನ್ನು ಪಡೆಯುತ್ತಾರೆ.

ಸಕಲ ಸ್ತೋತ್ರಗಳಿಗೆಲ್ಲ ಆದರ್ಶಪ್ರಾಯವಾಗಿರುವ ಪಶ್ಚಾತ್ತಾಪ ರೂಪವಾದ ಪ್ರಾಯಶ್ಚಿತ್ತದಂತಿರುವ ಈ ಬಗೆಯಾದ ಸ್ತೋತ್ರರತ್ನವನ್ನು ರಚಿಸಿ ಸಕಲ ಮುಮುಕ್ಷುಗಳಿಗೂ ಎಚ್ಚರಿಕೆಯನ್ನಿತ್ತು ಪರಮೋಪಕಾರವನ್ನು ಮಹಾನುಭಾವರಾದ ಶ್ರೀ ವಿಜಯೀ೦ದ್ರತೀರ್ಥರಿಗೆ ಭಕ್ತಿ ಶ್ರದ್ಧೆಗಳಿಂದ ನಮಿಸಿ ಪ್ರಾರ್ಥಿಸೋಣ!!

ವಿಜಯೀ೦ದ್ರರಾಯರ ವೃಂದಾವನದಲಿ ।
ವಿಜಯಸಖ ಸರ್ವ ಜಗಜ್ಜನ್ಮಾದಿಕರ್ತ ।
ಅಜಭಾವಾದಿಗಳಿಂದ ಸೇವ್ಯ ಶ್ರೀ ನರಹರಿ ಇಹನು ।
ವಿಜಯೀ೦ದ್ರಗುರು ಅಂತರ್ಯಾಮಿ ವಾಂಛಿತಪ್ರದನು ।।

” ವಿ ” ಯೆಂದರೆ ವಿಠಲ ಜ್ಞಾನ ಮುದವೀವ ।
” ಜ ” ಯೆಂದರೆ ಜಯವು ಪುಟ್ಟು ಸಾವಿಲ್ಲ ।
” ಯೀ ” ಯೆಂದರೆ ಜ್ಞಾನಕರ್ಮ ಪೂಜಾ ಫಲವು ।
” ಇಂದ್ರ ” ಯೆಂದರೆ ಐಶ್ವರ್ಯ ಸುಖವೇವ ।।

” ಶ್ರೀ ವಿಜಯೀ೦ದ್ರತೀರ್ಥರ ವಿದ್ಯಾ ಶಿಷ್ಯರಾದ ಶ್ರೀ ಕಂಬಾಲೂರು ರಾಮಚಂದ್ರತೀರ್ಥರು…”

ಪದವಾಕ್ಯ ಪ್ರಮಾಣಜ್ಞಾನ್ ಸೌಶೀಲ್ಯಾದ್ಯುಪ ಸೇವಿತಾನ್ ।
ವಿಜಯೀ೦ದ್ರಯತೀಂದ್ರಾಖ್ಯಾನ್ ಸೇವೇ ವಿದ್ಯಾ ಗುರೂನ್ಮಮ ।।

post courtesy – ಪಲ್ಲವಿ ನಾಗರಾಜು ಹಾವೇರಿ

Leave a comment